ಕರ್ನಾಟಕ

karnataka

By

Published : Jun 9, 2021, 3:57 PM IST

ETV Bharat / city

ತೈಲ ಬೆಲೆ ಏರಿಕೆಗೆ ಖಂಡನೆ: ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಕೈ ನಾಯಕರು

ಕೇಂದ್ರ ಸರ್ಕಾರ ಕೊರೊನಾ ಮಹಾಮಾರಿಯ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ತೈಲದ ಮೇಲೆ ತೆರಿಗೆ ವಿಧಿಸಿದೆ. ಇದು ಜನಸಾಮಾನ್ಯರಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ.

oil-prices-rise-issue
ತೈಲ ಬೆಲೆ ಏರಿಕೆಗೆ ಖಂಡನೆ

ಬೆಂಗಳೂರು:ಕೋವಿಡ್-19 ಮಹಾಮಾರಿ ಸಂದರ್ಭದಲ್ಲೂ ತೈಲದ ಮೇಲೆ ತೆರಿಗೆ ವಿಧಿಸಿ, ಜನರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ತೆರಿಗೆ ಭಯೋತ್ಪಾದನೆ ಎಂದು ಶಾಸಕ ಕೃಷ್ಣ ಭೈರೇಗೌಡ ಕಿಡಿಕಾರಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ನೆರೆ ರಾಷ್ಟ್ರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇದೆ. ಇದಲ್ಲದೆ ಭಾರತದಿಂದ ಆಮದು ಮಾಡಿಕೊಳ್ಳುತ್ತಿರುವ ಭೂತಾನ್ ದೇಶದಲ್ಲೂ ಭಾರತಕ್ಕಿಂತ ಕಡಿಮೆ ಬೆಲೆ ಇದೆ. ತೆರಿಗೆ ವಸೂಲಿ ಭೂತಗಳಾಗಿ ಪೆಟ್ರೋಲ್ ಬಂಕ್ ಗಳು ಪರಿವರ್ತನೆ ಆಗಿವೆ. ಕೂಡಲೇ ಸರ್ಕಾರ ಪೆಟ್ರೋಲ್-ಡೀಸೆಲ್ ಮೇಲೆ ಹೇರಿರುವ ತೆರಿಗೆಯನ್ನ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಓದಿ: ಕರ್ನಾಟಕ ಅನ್​ಲಾಕ್.. ಜೂನ್​ 14ರ ಬಳಿಕ ಅಗತ್ಯ ವಸ್ತುಗಳ ಖರೀದಿ ಸಮಯ ವಿಸ್ತರಣೆ ಎಂದ ಅಶೋಕ್​

ಬೆಲೆ ಏರಿಕೆ ದಿನಸಿ ಪದಾರ್ಥಗಳ ಬೆಲೆ ಮೇಲೂ ಪರಿಣಾಮ ಬೀರಿದ್ದು, ಪ್ರತಿ ಕೆಜಿಗೆ ಕನಿಷ್ಠ 8-9 ರೂ. ಬೆಲೆ ಏರಿಕೆ ಆಗಿದೆ. ಪ್ರತಿ ಕುಟುಂಬದ ಅಗತ್ಯ ಪದಾರ್ಥಕ್ಕೆ ತೈಲ ಬೆಲೆ ಏರಿಕೆಯಿಂದ 5% ಏರಿಕೆ ಆಗಿದೆ. ಬೆಳೆಗಳಿಗೆ 12% ಬೆಲೆ ಏರಿಕೆ ಹಾಗೂ ಮೊಟ್ಟೆ ಮತ್ತು ಮಾಂಸದ ಮೇಲೆ 11-16 % ಬೆಲೆ ಏರಿಕೆ ಆಗಿದೆ ಎಂದು ಕೇಂದ್ರದ ಅಂಕಿ ಅಂಶಗಳು ಹೇಳುತ್ತಿವೆ ಎಂದು ತಿಳಿಸಿದರು.

ನಂತರ ಮಾತನಾಡಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ಎಲ್ಲಾ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಜನಸಾಮಾನ್ಯರ ಕೆಲಸದ ಅಭದ್ರತೆ ನಡುವೆ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ತೈಲ ಬೆಲೆ ಏರಿಕೆಗೆ ಖಂಡನೆ

ಬೇಡಿಕೆಯ ಕುಸಿತದಿಂದ ನಿರುದ್ಯೋಗ ಸಮಸ್ಯೆ ಹೆಚ್ಚಳ ಆಗಲಿವೆ. ತೈಲ ಸಚಿವಾಲಯದ ಪೆಟ್ರೋಲ್ ಯೋಜನೆ ಇಲಾಖೆ ಹೇಳುವ ಪ್ರಕಾರ ತೈಲ ಬಳಕೆ 5% ಕಡಿಮೆ ಆಗಿದೆ. ಬೇಡಿಕೆ 4.6% ಕುಸಿತ ಆಗಿದ್ದು, ಮತ್ತೊಂದು ಸರ್ವೇ ಪ್ರಕಾರ 51% ರಷ್ಟು ಜನರು ಇತರೆ ವೆಚ್ಚಗಳನ್ನು ನಿಯಂತ್ರಿಸಿ ಪೆಟ್ರೋಲ್ ಡೀಸೆಲ್ ಗೇ ಹೆಚ್ಚು ಹಣವನ್ನು ಹಾಕುವಂತ ಪರಿಸ್ಥಿತಿ ಇದೆ. ಉಳಿತಾಯ ಹಣವನ್ನೂ ಪೆಟ್ರೋಲ್ ಹಾಕಿಸಿಕೊಳ್ಳಲು ಬಳಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದರು.

ಈ ರೀತಿ ಬೆಲೆ ಏರಿಕೆಯಿಂದ ಕೇಂದ್ರ ಸರ್ಕಾರ ಕೇವಲ ಶ್ರೀಮಂತರಿಗೆ ಓಲೈಕೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು. ಇನ್ನು ರಾಜ್ಯದ ಮುಖ್ಯಮಂತ್ರಿ ಬದಲಾವಣೆಗೆ ದೆಹಲಿಗೆ ಹೋಗುವ ಬದಲು ಬೆಲೆ ಏರಿಕೆ ಹಾಗೂ ಜನಸಾಮಾನ್ಯರ ಕಷ್ಟ ಹೇಳಲು ಹೋಗಲಿ. ಬಿಜೆಪಿಯವರಿಗೆ ಅಂತಹ ತಾಕತ್ ಇಲ್ಲ ಅಂದ್ರೆ ಅವರೊಂದಿಗೆ ಕಾಂಗ್ರೆಸ್ ನಾಯಕರು ಬರುತ್ತಾರೆ ಎಂದು ಖರ್ಗೆ ವ್ಯಂಗವಾಡಿದರು.

ಮುಂದಿನ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಮತ್ತೊಂದು ಭಾವನಾತ್ಮಕ ವಿಷಯ ತಂದು ಜನರ ಗಮನ ಬೇರೆಡೆ ಸೆಳೆಯುವ ಸಾಧ್ಯತೆ ಹೆಚ್ಚಿದೆ. ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆದಾಗ ಸೈಕಲ್ ಜಾಥಾ ಮಾಡಿದ್ದ ಬಿಜೆಪಿ ನಾಯಕರು ಈಗ ಮಾತೇ ಆಡುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿಗೆ ಸೈಕಲ್ ನೀಡಲಾಗುವುದು ಎಂದು ಮಾಧ್ಯಮಗೋಷ್ಟಿಯಲ್ಲಿ ಕಾಂಗ್ರೆಸ್​ ನಾಯಕರು ಘೋಷಿಸಿದರು.

ABOUT THE AUTHOR

...view details