ಬೆಂಗಳೂರು: ಒಂದೂವರೆ ದಶಕದಷ್ಟು ಹಳೆಯದಾದ ಹೊರ ವರ್ತುಲ ರಸ್ತೆ (ಪೆರಿಫರಲ್ ರಿಂಗ್ ರೋಡ್) ನಿರ್ಮಾಣಕ್ಕೆ ರಾಜ್ಯ ಸಂಪುಟ ಸಭೆ ಅಸ್ತು ಎಂದಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಹುನಿರೀಕ್ಷಿತ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ವಿಶೇಷ ಉದ್ದೇಶದ ವಾಹನ (ಎಸ್‌ಪಿವಿ)ವೆಂದು ಗುರುತಿಸಲಾದ ಹೊರ ವರ್ತುಲ ರಸ್ತೆ ನಿರ್ಮಾಣ ಯೋಜನೆಯನ್ನು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರಲು ಸರ್ಕಾರ ಪರ್ಯಾಯ ಪರಿಹಾರ ಮಾರ್ಗ ಕಂಡುಕೊಂಡಿದೆ.
ಹೊರ ವರ್ತುಲ ರಸ್ತೆಯು ಅಷ್ಟಪಥ ಮಾರ್ಗವಾಗಿದೆ. ಈ ರಸ್ತೆ ಮಾರ್ಗದುದ್ದಕ್ಕೂ 100 ಮೀಟರ್ ಅಗಲದ ವಾಣಿಜ್ಯ ಜಾಗದ ಎರಡು ಭಾಗದಲ್ಲಿ 30 ಮೀಟರ್ ಅಳತೆಯ ರಸ್ತೆ ನಿರ್ಮಿಸಲಿದ್ದು, ಒಟ್ಟು 71 ಕಿ.ಮೀ. ಉದ್ದದ ವಿಸ್ತೀರ್ಣ ಹೊಂದಲಿದೆ. ಕೆಲವು ಮಹತ್ವದ ಬದಲಾವಣೆಯೊಂದಿಗೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಯೋಜನೆಯ ಜಾರಿಗೆ ಸರ್ಕಾರ ನಿರ್ಧರಿಸಿದೆ.
6,000 ಕೋಟಿ ರೂ.ಗಳಷ್ಟಿದ್ದ ಪ್ರಾರಂಭಿಕ ಅಂದಾಜು ವೆಚ್ಚ 2020ರಲ್ಲಿ 20,000 ಕೋಟಿ ರೂ.ಗಳಿಗೇರಿದೆ. ಈ ಪೈಕಿ ಭೂಸ್ವಾಧೀನ ಪರಿಹಾರಕ್ಕೆಂದೇ 17,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆರ್ಥಿಕ ಹೊರೆ, ತ್ವರಿತ ಭೂಸ್ವಾಧೀನ ಹಾಗೂ ಅನಗತ್ಯ ವಿಳಂಬ ತಪ್ಪಿಸುವುದಕ್ಕಾಗಿ ಸಾರ್ವಜನಿಕ, ಸಹಭಾಗಿತ್ವ, ವಿನ್ಯಾಸ, ನಿರ್ಮಾಣ, ಆರ್ಥಿಕ, ನಿರ್ವಹಣೆ ಮತ್ತು ವರ್ಗಾವಣೆ (ಪಿಪಿಪಿ ಡಿಬಿಎಫ್ಒಟಿ) ಮಾದರಿ ಅನುಸರಿಸಿ, 50 ವರ್ಷಗಳ ಗುತ್ತಿಗೆ ಹಾಗೂ ಟೋಲ್ ಸಂಗ್ರಹಣೆಗೆ ಸರ್ಕಾರ ಸಮ್ಮತಿಸಿದೆ.