ಬೆಂಗಳೂರು: ನೈತಿಕತೆ ಎಂಬುದು ಕಾಂಗ್ರೆಸ್ ಡಿಎನ್‌ಎಯಲ್ಲೇ ಇಲ್ಲ. ಅನೈತಿಕ, ಭ್ರಷ್ಟತೆಯೇ ಕಾಂಗ್ರೆಸ್ ಪಕ್ಷದ ಜೀವಾಳ ಎಂದು ಬಿಜೆಪಿ ಟ್ವೀಟ್ ಮಾಡಿದೆ. ನೈತಿಕತೆ ತ್ಯಜಿಸಿದ ಕಾಂಗ್ರೆಸ್ ರಾಜಕಾರಣಿಗಳ ಪಟ್ಟಿ ಮಾಡಿರುವ ಬಿಜೆಪಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಜಮೀರ್ ಅಹ್ಮದ್ ಖಾನ್, ಕೆ.ಜೆ. ಜಾರ್ಜ್, ವಿನಯ್ ಕುಲಕರ್ಣಿ, ಆರ್.ವಿ. ದೇಶಪಾಂಡೆ, ಬಿ.ಕೆ. ಹರಿಪ್ರಸಾದ್ ಸಾಕೇ, ಇನ್ನಷ್ಟು ಹೆಸರು ಬೇಕೇ? ಎಂದು ಕೇಳಿದೆ.
ದೇಶಕ್ಕೆ ನೈತಿಕತೆಯ ಪಾಠ ಮಾಡುವ ಕಾಂಗ್ರೆಸ್ ಪಕ್ಷದ ನಡುಮನೆಯಲ್ಲೇ ಅನೈತಿಕತೆಯ ಬಿರುಮಳೆ ಸುರಿಯುತ್ತಿದೆ. ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಪಕ್ಷವನ್ನೇ ದೋಚಿ ಬೇಲ್ ಮೇಲೆ ಅಲೆದಾಡುತ್ತಿರುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ತಾನು ಕಳ್ಳ ಪರರ ನಂಬ ಎಂದಿದೆ.
ರಾಜ್ಯಸಭೆಯ ಕಾಂಗ್ರೆಸ್ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಕ್ರಮ ಸಂಪತ್ತಿನ ಬಗ್ಗೆ ಮಾತನಾಡಲು ಹೊರಟರೆ ಅದೊಂದು ಮೆಗಾ ಧಾರಾವಾಹಿಯಾಗಬಹುದು. ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಖರ್ಗೆ ಅವರಿಗೆ ರಾಜ್ಯಸಭಾ ವಿಪಕ್ಷ ನಾಯಕನಾಗಿ ಮುಂದುವರಿಯಲು ನೈತಿಕತೆ ಕಾಡುವುದಿಲ್ಲವೇ? ಕೊಲೆಗಾರನಿಗೆ ಕೊಲ್ಲುವ ಉದ್ದೇಶವಿರಲಿಲ್ಲ ಎಂದು ಚಾಕು ಹಿಡಿದವನ ಪರವಾಗಿ ಮಾತನಾಡಿದ್ದ ಜಮೀರ್ ಅಹಮದ್ ಅವರಿಗೆ ನೈತಿಕತೆ ಇರಲಿ, ಕನಿಷ್ಟ ಮಾನವೀಯತೆಯಾದರೂ ಇದೆಯೇ? ಎಂದು ಕಟು ಟೀಕೆ ಮಾಡಿದೆ.
ಇದನ್ನೂ ಓದಿ:ಆಹೋರಾತ್ರಿ ಧರಣಿ ಮುಗಿಸುತ್ತಿದ್ದೇವೆ, ಸರ್ಕಾರದ ವಿರುದ್ಧದ ಹೋರಾಟ ನಿಲ್ಲಲ್ಲ: ಸಿದ್ದರಾಮಯ್ಯ
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಅತ್ಯಂತ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ನೈತಿಕ ಹೊಣೆ ಹೊತ್ತು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ. ಆದರೆ ಇಂಥ ನೈತಿಕ ವಿಚಾರಗಳ ಪ್ರಶ್ನೆ ಬಂದಾಗ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ನೆನಪಿಸಬೇಕೇ?. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರೇ ತನ್ನ ಸಾವಿಗೆ ಕಾರಣ ಎಂದು ಡಿವೈಎಸ್ಪಿ ಗಣಪತಿ ವಿಡಿಯೋ ಹೇಳಿಕೆ ನೀಡಿ ಆತ್ಮಹತ್ಯೆ ಮಾಡಿಕೊಂಡರು. ಆಗ ಇದೇ ಸಿದ್ದರಾಮಯ್ಯ ಅವರು ಆರೋಪಿ ಸಚಿವರನ್ನು ಸಮರ್ಥಿಸಿಕೊಂಡಿದ್ದರು. ಸಿದ್ದರಾಮಯ್ಯನವರೇ, ಈಗ ಸದಾರಮೆ ನಾಟಕವೇಕೆ? ಎಂದು ಪ್ರಶ್ನಿಸಿದ್ದಾರೆ.