ಬೆಂಗಳೂರು:ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಗೆ ಮುಹೂರ್ತ ಫಿಕ್ಸ್ ಆಗಿದೆ. ರಾಜ್ಯಸಭಾ ಸದಸ್ಯರೂ ಆದ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅಧ್ಯಕ್ಷತೆಯಲ್ಲಿ ಡಿಸೆಂಬರ್ 19ರಂದು ಬೆಂಗಳೂರಿನ ಕೋರಮಂಗಲದ ಕಲಾದ್ವಾರಕಾ ಸಭಾಂಗಣದಲ್ಲಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ ನಡೆಯಲಿದೆ.
ಅಂದು ಬೆಳಿಗ್ಗೆ 10.30ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಕಾರ್ಯಕಾರಿಣಿ ಉದ್ಘಾಟಿಸಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇತ್ತೀಚೆಗೆ ಜಾರಿಗೊಳಿಸಿದ ರೈತಪರ ಕೃಷಿ ಸುಧಾರಣಾ ಮಸೂದೆಗಳನ್ನು ಬೆಂಬಲಿಸಿ ಅಭಿನಂದಿಸುವ ನಿರ್ಣಯಗಳನ್ನು ಮಂಡಿಸಿ ಅನುಮೋದಿಸಲಾಗುವುದು ಮತ್ತು ರೈತರ ವಾರ್ಷಿಕ ವರಮಾನ ದ್ವಿಗುಣಗೊಳಿಸಿ ರೈತರ ಆರ್ಥಿಕ ಸಬಲೀಕರಣಕ್ಕಾಗಿ ತಂದ ಕಾಯ್ದೆಗಳ ಬಗ್ಗೆ ಸಂವಾದ ಕಾರ್ಯಕ್ರಮವನ್ನು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಹಾಗೂ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಮೀರ್ ಕಾಗಲ್ಕರ್ ನಡೆಸಿಕೊಡಲಿದ್ದಾರೆ.