ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿರುವ ಕಾಂಗ್ರೆಸ್ ಪಕ್ಷವು ಎರಡೂ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಟ್ವೀಟ್ ಮೂಲಕ ತನ್ನ ಬೇಸರ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷ, ಜಿಎಸ್ಟಿ ತೆರಿಗೆ ಬಾಕಿ ಕೇಳಿದ್ದಕ್ಕೆ ಆರ್ಬಿಐನಲ್ಲಿ ಸಾಲ ಮಾಡಿ ಎಂದಿದೆ ಕೇಂದ್ರ ಸರ್ಕಾರ. ಸಾಲ ಮಾಡುತ್ತಿರೋ ಅಥವಾ ಪಟ್ಟು ಹಿಡಿದು ಕೇಳುತ್ತrರೋ ಬಿ ಎಸ್ ಯಡಿಯೂರಪ್ಪನವರೇ? ರಾಜ್ಯದ ಪರ ಧ್ವನಿ ಏರಿಸಿ ನ್ಯಾಯ ಒದಗಿಸುತ್ತೀರೋ ಅಥವಾ ರಾಜೀನಾಮೆ ಕೊಟ್ಟು ಅಸಹಾಯಕತೆಯನ್ನು ಒಪ್ಪಿಕೊಳ್ಳುತ್ತೀರೋ 25 ಬಿಜೆಪಿ ಸಂಸದರೇ? ಎಂದು ಟ್ವಿಟರ್‌ನಲ್ಲಿ ಅಸಮಾಧಾನ ಹೊರಹಾಕಿದೆ.
ಆಸ್ತಿಪಾಸ್ತಿ ನಷ್ಟ :ರಾಜ್ಯದಲ್ಲಿ ಸಂಭವಿಸಿದ ನೆರೆಯಿಂದಾಗಿ 56 ತಾಲೂಕುಗಳ 885 ಹಳ್ಳಿಗಳ ಜನ ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ. 3000 ಮನೆಗಳು, 393 ಕಟ್ಟಡಗಳು, 250 ಸೇತುವೆ ಕುಸಿದಿವೆ. 80,000 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಆದರೂ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದರೆ, 25 ಬಿಜೆಪಿ ಸಂಸದರು ಸೊಲ್ಲೆತ್ತುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಮಲತಾಯಿ ಧೋರಣೆ :ಬಿಜೆಪಿ ರಾಜ್ಯದ ಜನರ ಋಣ ತೀರಿಸಿದ್ದು ಹೀಗೆ ಎಂದು ವಿವರಿಸಿರುವ ಕಾಂಗ್ರೆಸ್, 2019ರ ನೆರೆ ಪೀಡಿತರಿಗೆ ಇನ್ನೂ ಗುಡಿಸಲು ವಾಸ ಭಾಗ್ಯ, ಕಳೆದ ವರ್ಷದ ನೆರೆಗೆ ಬಿಡಿಗಾಸು ಪರಿಹಾರ, ರಾಜ್ಯದ ಆರ್ಥಿಕ ಅನುದಾನದಲ್ಲಿ ಕಡಿತ, ರಾಜ್ಯಕ್ಕೆ ಬರಬೇಕಿದ್ದ ಜಿಎಸ್ಟಿ ಬಾಕಿ, ಕೊರೊನಾ ಭ್ರಷ್ಟಾಚಾರ, ಕೇಂದ್ರದ ಮಲತಾಯಿ ಧೋರಣೆ ತೋರಿಸಿದೆ ಎಂದು ಆರೋಪಿಸಿದೆ.
ರಾಜ್ಯಕ್ಕೆ ದ್ರೋಹ ಬಗೆದ ಬಿಜೆಪಿ ಕೊರೊನಾ ಚಿಕಿತ್ಸಾ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ, ಕಾರ್ಮಿಕರಿಗೆ ಕೊಟ್ಟ ಊಟದಲ್ಲಿ ಭ್ರಷ್ಟಾಚಾರ, ಬಡವರ ಅಕ್ಕಿ ಅಕ್ರಮ ಮಾರಾಟ, ಗರ್ಭಿಣಿಯರು ಮತ್ತು ಮಕ್ಕಳ ಆಹಾರ ಸಾಮಗ್ರಿ ಅಕ್ರಮ, ಕೊರೊನಾ ವಾರಿಯರ್ಸ್‌ಗೆ ಸರಿಯಾದ ಚಿಕಿತ್ಸೆ ಇಲ್ಲದೆ ಸಾವು ಮತ್ತಿತರ ಅನ್ಯಾಯವನ್ನು ಮಾಡಿದೆ ಎಂದಿದೆ. ಆಂಬ್ಯುಲೆನ್ಸ್ ಕೊರತೆಯಿಂದ ಬೀದಿಯಲ್ಲೇ ಪ್ರಾಣ ಬಿಟ್ಟ ಜನ, ಆಶಾ ಕಾರ್ಯಕರ್ತೆಯರ ನಿರ್ಲಕ್ಷ್ಯ, ಪರಿಹಾರ ಸಿಗದೆ ನೇಕಾರರ ಆತ್ಮಹತ್ಯೆ, ಕಿರುಕುಳದಿಂದ ವೈದ್ಯಾಧಿಕಾರಿ ಆತ್ಮಹತ್ಯೆ, ರೈತರ ನಿರ್ಲಕ್ಷ್ಯ, ಅಸಂಘಟಿತ ಕಾರ್ಮಿಕರಿಗೆ ದೊರೆಯದ ಪರಿಹಾರ ಮತ್ತು ಅನುದಾನ ಹಾಗೂ ಜಿಎಸ್ಟಿ ಪಾಲಿನಲ್ಲಿ ದ್ರೋಹ ಬಿಜೆಪಿಯ ಕುಖ್ಯಾತಿಗೆ ಕನ್ನಡಿ ಹಿಡಿಯುವ ಅಂಶಗಳಾಗಿವೆ ಎಂದಿದೆ.
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ :ದೇಶದ ಆರ್ಥಿಕತೆ ಸಂಪೂರ್ಣ ನೆಲಕ್ಕಚ್ಚಿದ್ದು, 40 ವರ್ಷಗಳಲ್ಲೇ ಮೊದಲ ಬಾರಿ ಸಮಗ್ರ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ 23.9 ನಷ್ಟು ಮಹಾ ಕುಸಿತ ಕಂಡಿದೆ. 'ಅಚ್ಛೇ ದಿನ್'ನ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತ ವೈಫಲ್ಯ, ದೂರದೃಷ್ಟಿಯ ಕೊರತೆ, ಸರ್ವಾಧಿಕಾರಿ ಧೋರಣೆಗಳು ದೇಶವನ್ನು ಆರ್ಥಿಕ ಅಧಃಪಥನದತ್ತ ಕೊಂಡೊಯ್ದಿವೆ.
ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಅಚ್ಚೇ ದಿನಗಳನ್ನು ಗಮನಿಸುವುದಾದರೆ, ರೂಪಾಯಿ ಮೌಲ್ಯ ದಾಖಲೆ ಕುಸಿತ, ಜಿಡಿಪಿ ದಾಖಲೆ ಕುಸಿತ -23.9, ನಿರುದ್ಯೋಗ ಪ್ರಮಾಣ ದಾಖಲೆ ಏರಿಕೆ, ಕೊರೊನಾ ಪ್ರಕರಣಗಳ ದಾಖಲೆ ಏರಿಕೆ, ತೈಲ ಬೆಲೆ ದಾಖಲೆ ಮಟ್ಟದ ಏರಿಕೆ, ತೈಲದ ಅಬಕಾರಿ ಸುಂಕ ದಾಖಲೆ ಏರಿಕೆ ಹಾಗೂ ಎನ್ಪಿಎ ದಾಖಲೆ ಮಟ್ಟದಲ್ಲಿ ಏರಿಕೆ ಮಾಡಿರುವುದು ಆಗಿದೆ ಎಂದಿದೆ.