ಬೆಂಗಳೂರು:ಸುಮಾರು ಇಪ್ಪತ್ತರ ವಯಸ್ಸಿನವರು ಉತ್ತಮ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದರೆ, ನಗರದ ಯುವಕರಿಬ್ಬರು ಉಳಿದವರಿಗಿಂತ ಭಿನ್ನವಾಗಿ ಆಲೋಚಿಸಿ ಷೇರುಪೇಟೆಯ ವಹಿವಾಟಿನಿಂದಲೇ ಹಣ ಗಳಿಸಲು ಹಾಗೂ ಇತರರಿಗೂ ತರಬೇತಿ ನೀಡಿ ಆರ್ಥಿಕವಾಗಿ ಸಬಲರನ್ನಾಗಿರುವ ಉದ್ದೇಶದಿಂದ ಹೆವೆನ್‌ಸ್ಪೈರ್ (Havenspire) ನವೋದ್ಯಮ ಸ್ಥಾಪಿಸಿ, ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ.
ವಿಐಟಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದುತ್ತಿರುವಾಗಲೇ ಷೇರುಪೇಟೆಯ ವಹಿವಾಟಿನ ಆಸಕ್ತಿ ಹೊಂದಿದ್ದ ಸಮಾನ ಮನಸ್ಕ ಗೆಳೆಯರಿಬ್ಬರು ಸೇರಿಕೊಂಡು, ಷೇರುಪೇಟೆಯ ಬಗ್ಗೆ ಆನ್‌ಲೈನ್ ತರಬೇತಿ (e-learning) ನೀಡುವ ಅತಿದೊಡ್ಡ ನವೋದ್ಯಮವನ್ನು ಸಿಲಿಕಾನ್ ಸಿಟಿಯಲ್ಲಿ ಸ್ಥಾಪಿಸಿದ್ದಾರೆ. ಷೇರುಪೇಟೆಯ ವಹಿವಾಟಿನ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಆತಂಕ ದೂರ ಮಾಡಿ, ಬಂಡವಾಳ ಮಾರುಕಟ್ಟೆಯ ವಹಿವಾಟಿನ ಪ್ರಯೋಜನಗಳನ್ನು ಮನವರಿಕೆ ಮಾಡಿಕೊಟ್ಟು, ಷೇರು ವಹಿವಾಟು ನಡೆಸಲು ಹೆವೆನ್‌ಸ್ಪೈರ್ ನಗರದಿಂದ ಆನ್‌ಲೈನ್‌ನಲ್ಲಿಯೇ ತರಬೇತಿ ನೀಡುತ್ತಿದೆ.
ಕಾಲೇಜ್‌ನಲ್ಲಿ ಓದುತ್ತಿರುವ ಬಹುತೇಕರು, ತಮ್ಮ ಪಾಕೆಟ್ ಮನಿ ಅಥವಾ ದೂರದ ಊರಿನಿಂದ ತಮ್ಮ ದಿನನಿತ್ಯದ ಖರ್ಚು ವೆಚ್ಚಗಳಿಗಾಗಿ ಪಾಲಕರು ಕಳಿಸುವ ಹಣವನ್ನು ತಿಂಗಳು ಪೂರ್ಣವಾಗುವ ಮೊದಲೇ ಖಾಲಿ ಮಾಡಿ ಸ್ನೇಹಿತರಲ್ಲಿ ಸಾಲ ಸೋಲ ಮಾಡುವುದು ಸಾಮಾನ್ಯ ಸಂಗತಿಯಾಗಿರುತ್ತದೆ. ಈ ಮಧ್ಯೆ ತಮ್ಮ ಬಳಿ ಇರುವ ಹಣದಲ್ಲಿ ಅಷ್ಟಿಷ್ಟು ಉಳಿಸುವ ಪ್ರವೃತ್ತಿ ರೂಢಿಸಿಕೊಂಡವರ ಸಂಖ್ಯೆ ತುಂಬಾ ಕಡಿಮೆ. ತಿಂಗಳ ಹಣದಲ್ಲಿಯೇ ಬಹುಪಾಲನ್ನು ಉಳಿಸಿ, ಅದನ್ನು ವೃದ್ಧಿಸುವ ಕನಸು ಕಾಣುವವರ ಸಂಖ್ಯೆ ಅತಿ ವಿರಳ.