ಬೆಂಗಳೂರು:ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನದ ಭಿಕ್ಷೆ ಬೇಡೋದ್ರಲ್ಲಿ ತಪ್ಪೇನಿದೆ? ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನಮ್ಮ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಹುಲಿಗಳ ಹಾಗೆ ಇದ್ದವರು, ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಭಿಕ್ಷೆ ಬೇಡುತ್ತಿದ್ದಾರೆ ಎಂದು ಹೇಳಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್, ನಾವು ಯಾವತ್ತಿದ್ದರೂ ಹುಲಿಗಳೇ. ಕ್ಷೇತ್ರದ ಅಭಿವೃದ್ದಿಗೋಸ್ಕರ ಸರ್ಕಾರದ ಬಳಿ ಅನುದಾನ ಭಿಕ್ಷೆ ಬೇಡೋದರಲ್ಲಿ ತಪ್ಪೇನಿದೆ. ನಾವು ಕಾಂಗ್ರೆಸ್ ಬಿಡುತ್ತೇವೆ ಎಂದು ಎಲ್ಲೂ ಹೇಳಿಲ್ಲ. ಬಿಜೆಪಿ ಸೇರುತ್ತೇವೆ ಅಂತಾನೂ ಹೇಳಿಲ್ಲ. ಸುಪ್ರೀಂಕೋರ್ಟ್ನಲ್ಲಿ ಸೆ.23 ರಂದು ಈ ಕುರಿತ ವಿಚಾರಣೆ ಇದೆ. ಆಮೇಲೆ ನೋಡೋಣ ಎಂದು ಸೂಚ್ಯವಾಗಿ ತಿಳಿಸಿದ್ರು.
'ಪರಮೇಶ್ವರ್ ಮೂಲೆಗುಂಪು ಮಾಡೋಕೆ ಸಾಧ್ಯವಿಲ್ಲ'
ಡಾ. ಜಿ. ಪರಮೇಶ್ವರ್, ಸಿದ್ದರಾಮಯ್ಯ ಹಾವು ಮುಂಗುಸಿ ಹಾಗೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನಲ್ಲಿ ಪರಮೇಶ್ವರ್ ಅವರನ್ನು ಯಾರಿಂದಲೂ ಅವರನ್ನು ಮೂಲೆಗುಂಪು ಮಾಡೋಕೆ ಸಾಧ್ಯವಿಲ್ಲ. ಪರಮೇಶ್ವರ್ ಬಿಟ್ಟು ಪಕ್ಷ ಕಟ್ಟುತ್ತೇವೆ ಅನ್ನೋದು ಭ್ರಮೆ. ಜಾತಿ, ಶಿಕ್ಷಣ, ಹಣ ಹೀಗೆ ಎಲ್ಲದರಲ್ಲೂ ಅವರು ಬಲಿಷ್ಠವಾಗಿದ್ದಾರೆ. ಡಿಸಿಎಂ ಆಗುವ ವೇಳೆಯೂ ಅವರಿಗೆ ಕಿರಿಕಿರಿ ಮಾಡಿದರು ಎಂದು ವಿವರಿಸಿದರು.
'ತೀರ್ಪು ನಮ್ಮ ಪರವಾಗಿಯೇ ಬರುತ್ತೆ'
ನಾವು ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇವೆ. ನಮ್ಮನ್ನು ಉಚ್ಛಾಟನೆ ಮಾಡೋರು ಯಾರು? ನಾವಿನ್ನೂ ಮೂರು ವರ್ಷ ಶಾಸಕರಾಗಿಯೇ ಇರುತ್ತೇವೆ. ಅದಕ್ಕಾಗಿ ಸುಪ್ರೀಂಕೋರ್ಟ್‌ಗೆ ಹೋಗಿದ್ದೇವೆ. ನಮ್ಮ ಪರವಾಗಿ ತೀರ್ಪು ಬರುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ಮಧ್ಯಂತರ ಚುನಾವಣೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜೆಡಿಎಸ್‌ನವರಿಗೆ ಏನು ಕೆಲಸ ಇಲ್ಲ. ಅನರ್ಹ ಶಾಸಕರದ್ದೇ ಜಪ. ಮಧ್ಯಂತರ ಚುನಾವಣೆ ಬಗ್ಗೆ ಸಿದ್ದರಾಮಯ್ಯಗೆ ಗೊತ್ತಾ? ಆ ಬಗ್ಗೆ ಚುನಾವಣಾ ಆಯೋಗ ನಿರ್ಧಾರ ಮಾಡಬೇಕು ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ರು.