ಬೆಂಗಳೂರು: ರಾಜ್ಯಾದ್ಯಂತ ಇಂದು ಎಸ್ಎಸ್ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. 53,155 ವಿದ್ಯಾರ್ಥಿಗಳ ಪೈಕಿ 29,522 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.55.54ರಷ್ಟು ಫಲಿತಾಂಶ ಬಂದಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಶಿಕ್ಷಣ ಇಲಾಖೆಯಲ್ಲಿ ಫಲಿತಾಂಶ ಪ್ರಕಟಿಸಿದರು. ಎಸ್ಎಸ್‌ಎಲ್‌ಸ್ ಬೋರ್ಡ್ ನಿರ್ದೇಶಕಿ ಸುಮಂಗಲ ಈ ವೇಳೆ ಉಪಸ್ಥಿತರಿದ್ದರು.
ಸಾಂಕ್ರಾಮಿಕ ಕೋವಿಡ್ ಹಿನ್ನೆಲೆಯಲ್ಲಿ 2020-21ರ ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ನಡೆಸಬೇಕೇ ಬೇಡವೇ? ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದವು. ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡುವುದು ಹಾಗೂ ಅವರ ಕಲಿಕಾ ಮಟ್ಟ ನಿರ್ಧಾರ ಮಾಡುವುದು ಕಷ್ಟವಾಗಿತ್ತು. ಇದಕ್ಕೆ ಕಾರಣ, ಕಳೆದ ವರ್ಷ 9ನೇ ತರಗತಿಯ ಪರೀಕ್ಷೆಯೇ ನಡೆದಿರಲಿಲ್ಲ. ಹಾಗಾಗಿ, ಯಾವುದೇ ಮಾನದಂಡ ಇಲ್ಲದೇ ಇರುವುದರಿಂದ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿತ್ತು.
ಇವೆಲ್ಲದರ ನಡುವೆ ಜುಲೈ 19-22ರಂದು ಪರೀಕ್ಷೆ ನಡೆಸಲಾಗಿತ್ತು. ಎಸ್ಎಸ್ಎಲ್‌ಸಿ ಪರೀಕ್ಷೆಯನ್ನು ವಿಶೇಷ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಮಾದರಿ ಬದಲಾಯಿಸಿ ಬಹುಆಯ್ಕೆ ಪ್ರಶ್ನೆಗಳನ್ನು ನೀಡಿ ನಡೆಸಲಾಗಿತ್ತು. ಅದು ಕೂಡ 6 ದಿನಗಳ ಪರೀಕ್ಷೆಗೆ ಕತ್ತರಿ ಹಾಕಿ, ವಿಷಯವಾರು ಮೂಲಕ ಎರಡೇ ದಿನ ಪರೀಕ್ಷೆ ನಡೆಸಲಾಗಿತ್ತು. ಈ ನಡುವೆ ಬಹಷ್ಟು ವಿದ್ಯಾರ್ಥಿಗಳು ಕೊರೊನಾ ಭೀತಿಗೆ ಹೆದರಿ ಮೊದಲ ಆಯೋಜನೆಯಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರು. ಬದಲಿಗೆ ಮುಂದಿನ ಸಲ ಪರೀಕ್ಷೆ ಬರೆಯುವುದಾಗಿ ತಿಳಿಸಿದ್ದರು. ಪರಿಣಾಮ ಸೆಪ್ಟೆಂಬರ್ 27-29 ರಂದು ಸುಮಾರು 53,155 ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲಾಗಿತ್ತು.
ಪೂರಕ ಪರೀಕ್ಷೆ ಬರೆದವರಿಗೆ ಯಾಕಿಲ್ಲ ಗ್ರೇಸ್ ಮಾರ್ಕ್ಸ್?
ಜುಲೈನಲ್ಲಿ ಪರೀಕ್ಷೆ ಬರೆದವರನ್ನು ಕೊರೊನಾ ಆತಂಕದ ಕಾರಣಕ್ಕೆ ಯಾರನ್ನೂ ಫೇಲ್ ಮಾಡೋದಿಲ್ಲ. ಬದಲಿಗೆ ಕಡಿಮೆ ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಎಲ್ಲರನ್ನೂ ಪಾಸ್ ಮಾಡಲಾಗಿತ್ತು. ಆದರೆ ಈ ಸಲ ಪರೀಕ್ಷೆ ಬರೆದು ಫೇಲ್ ಆದವರಿಗೆ ಗ್ರೇಸ್ ಮಾರ್ಕ್ಸ್ ನೀಡಿಲ್ಲ. ಬದಲಿಗೆ ಪೂರಕ ಪರೀಕ್ಷೆ ತೆಗೆದುಕೊಂಡ 23,655 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ ಪಾಸ್ ಎಂದುಕೊಂಡವರಿಗೆ ನಿರಾಸೆಯಾಗಿದೆ.
'ಮುಂದಿನ ಸಲ ಪರೀಕ್ಷೆ ಬರೆಯಬಹುದು'
ಈ ಕುರಿತು ಮಾತನಾಡಿದ ಸಚಿವ ನಾಗೇಶ್, ಈ ಹಿಂದಿನ ಆದೇಶದಲ್ಲೇ ಪೂರಕ ಪರೀಕ್ಷೆ ಬರೆದವರಿಗೆ ಅವರು ಪಡೆದ ಅಂಕವನ್ನೇ ಫೈನಲ್ ಎಂದು ತಿಳಿಸಲಾಗಿತ್ತು. ಈಗ ಫೇಲ್ ಆದವರೆಲ್ಲಾ ಮುಂದಿನ ಸಲ ಪರೀಕ್ಷೆ ಬರೆಯಬಹುದು. ಅವರಿಗೆ ಗ್ರೇಸ್ ಮಾರ್ಕ್ಸ್ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಬೋರ್ಡ್ ನಿರ್ದೇಶಕಿ ಸುಮಂಗಲ ಮಾತನಾಡಿ, ಮೊದಲ ಪರೀಕ್ಷೆ ಬರೆದಿದ್ದವರಿಗೆ ಅಷ್ಟೇ ಪಾಸ್ ಆಗಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಆ ಅವಕಾಶ ಉಪಯೋಗಿಸಿಕೊಳ್ಳುವುದು, ಬಿಡುವುದು ವಿದ್ಯಾರ್ಥಿಗಳಿಗೆ ಬಿಟ್ಟಿದ್ದು. ಯಾರು ಅವಕಾಶ ಉಪಯೋಗಿಸಿಕೊಂಡಿಲ್ಲ ಅವರಿಗೆ ಮುಂದಿನ ಪರೀಕ್ಷೆ ಬರೆಯಲು ಅವಕಾಶ ಕೊಡುವುದಾಗಿ ಹೇಳಿದ್ದೇವೆಯೇ ಹೊರತು, ಎಲ್ಲರನ್ನೂ ಪಾಸ್ ಮಾಡುತ್ತೇವೆ ಅಂತ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮ.3 ಗಂಟೆಯ ಬಳಿಕ ಎಸ್ಎಂಎಸ್ ಮೂಲಕ ಫಲಿತಾಂಶ
ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಫಲಿತಾಂಶವನ್ನು ಮಧ್ಯಾಹ್ನ 3 ಗಂಟೆಯ ನಂತರ ಎಸ್‌ಎಂಎಸ್ ಮೂಲಕ ರವಾನಿಸಲಾಗುತ್ತೆ. Kseeb.Karnataka.gov.in ಅಥವಾ sslcseptresults ಹಾಗೂ karresults.nic.in ನಲ್ಲಿಯೂ ಫಲಿತಾಂಶ ವೀಕ್ಷಿಸಬಹುದಾಗಿದೆ.
ನಗರ ಫಲಿತಾಂಶ
ನೋಂದಣಿ- ಉತ್ತೀರ್ಣ
22,757 - 10968
ಗ್ರಾಮೀಣ ಭಾಗ
30,398 -18 554
ಅಭ್ಯರ್ಥಿವಾರು ಫಲಿತಾಂಶ
ಹೊಸ ವಿದ್ಯಾರ್ಥಿಗಳು - 18,417ರಲ್ಲಿ 9182 ವಿದ್ಯಾರ್ಥಿಗಳು ಪಾಸ್