ಬೆಂಗಳೂರು:ಕೊರೊನಾ ಆತಂಕದ ನಡುವೆಯೂ ಯಶಸ್ವಿಯಾಗಿ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ನಾಳೆ ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ.
ರಾಜ್ಯಾದ್ಯಂತ ಜೂನ್ 25ರಿಂದ ಜುಲೈ 4ವರೆಗೆ ನಡೆದ ಪರೀಕ್ಷೆಯಲ್ಲಿ ಸುಮಾರು 8,48,203 ಮಕ್ಕಳು ಹಾಜರಾಗಿದ್ದರು. ಅವರಲ್ಲಿ 4,48,560 ಬಾಲಕರು, 3,99,643 ಬಾಲಕಿಯರು ಪರೀಕ್ಷೆ ಬರೆದಿದ್ದಾರೆ. ಸರ್ಕಾರಿ ಶಾಲೆಗಳಿಂದ 3.,31,652, ಅನುದಾನಿತ ಶಾಲೆಯಿಂದ 2,29,381, ಅನುದಾನರಹಿತ ಶಾಲೆಗಳಿಂದ 2,87,170 ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು 4,69,866 ವಿದ್ಯಾರ್ಥಿಗಳು ಮತ್ತು ನಗರ ಪ್ರದೇಶದಿಂದ 3,78,337 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.
ನಾಳೆ ಇಲಾಖೆಯ www.kseeb.kar.nic.in, www.karresults.nic.in ವೆಬ್ ಸೈಟ್ನಲ್ಲಿ ಹಾಗೂ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಫಲಿತಾಂಶ ಬರಲಿದೆ. ಇದಕ್ಕೆ ಪ್ರತ್ಯೇಕ ನೋಂದಣಿ ಅಗತ್ಯವಿಲ್ಲ.
ಹಳೆಯ ವಿವಾದಗಳ ಮೆಲುಕು:
ಹಾಸನ ಫಸ್ಟ್ ಬರಲು ಸಾಮೂಹಿಕ ನಕಲು ಆರೋಪ:
2018-2019 ಸಾಲಿನಲ್ಲಿ ಮೊದಲ ಸ್ಥಾನ ಗಳಿಸಿದ್ದ ಹಾಸನದಲ್ಲಿ ಸಾಮೂಹಿಕ ನಕಲು ಆರೋಪ ಕೇಳಿಬಂದಿತ್ತು. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರೇವಣ್ಣ ಹೆಸರು ಕೇಳಿ ಬಂದಿತ್ತು. ಆದರೆ, ಮಾಜಿ ಸಚಿವ ರೇವಣ್ಣ ಹಾಸನ ಫಸ್ಟ್ ಬರೋದಕ್ಕೆ ರೋಹಿಣಿ ಸಿಂಧೂರಿ ಕಾರಣವಲ್ಲ. ಬದಲಿಗೆ ಪತ್ನಿ ಭವಾನಿ ಅಂತ ಹೇಳಿಕೊಂಡಿದ್ದರು. ಅವರ ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದು, ಹಾಸನ ಪ್ರಥಮ ಸ್ಥಾನಕ್ಕೇರಲು 3-4 ಬಾರಿ ಸಭೆ ನಡೆಸಲಾಗಿತ್ತು. ಅಲ್ಲದೆ, ವಿಶೇಷ ತರಗತಿ ನಡೆಸಲು ಸೂಚಿಸಿದ್ದರು. ಇದೇ ಮುಖ್ಯ ಕಾರಣ ಎಂದು ಹೇಳಿಕೊಂಡಿದ್ದರು.
ಇದಾದ ಬಳಿಕ ಮೊದಲ ಸ್ಥಾನದ ಕುರಿತು ಚೆನ್ನರಾಯಪಟ್ಟಣ ಪ್ರೌಢ ಶಾಲಾ ಶಿಕ್ಷಕ ಶಿವಕುಮಾರ್, ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ಈ ದೂರಿನ ಪತ್ರದಲ್ಲಿ ಕಳೆದ ಬಾರಿಯ ಫಲಿತಾಂಶದಲ್ಲಿ ಹಾಸನದ ಉಪನಿರ್ದೇಶಕ ಮಂಜುನಾಥ್ ಸಾಮೂಹಿಕ ನಕಲು ಮಾಡಲು ಮೌಖಿಕ ಆದೇಶ ನೀಡಿರೋದಾಗಿ ಹಾಗೂ ಚನ್ನರಾಯಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾವತಿ ಅವರು ಕೂಡ ಇದಕ್ಕೆ ಸಾಥ್ ನೀಡಿರುವುದಾಗಿ ಉಲ್ಲೇಖ ಮಾಡಿದ್ದರು. ಇವರಿಂದಲೇ ಕಳೆದ ಬಾರಿ ಹಾಸನಕ್ಕೆ ಪ್ರಥಮ ಸ್ಥಾನ ಬರಲು ಸಾಧ್ಯವಾಗಿದೆ ಎಂದು ಬರೆದಿದ್ದರು.
2019-20ನೇ ಸಾಲಿನಲ್ಲಿ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮನಾಥ ಅವರು, ಇಲ್ಲಿ ಹೆಚ್ಚು ನಕಲು ಮಾಡಲು ಹೆಚ್ಚಿನ ಸಾಧ್ಯತೆಗಳಿವೆ. ಆದ್ದರಿಂದ, ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬಿಗಿ ಭದ್ರತೆಯಿಂದ ನಕಲಿಗೆ ಅವಕಾಶ ನೀಡದಂತೆ ಎಲ್ಲಾ ಕಡೆ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ತಿಳಿಸಿದ್ದರು. ಅಲ್ಲದೆ, ಪರೀಕ್ಷೆಯ ನೈಜತೆಯನ್ನು ಕಾಪಾಡಲು ಮನವಿ ಮಾಡಿದ್ದರು. ಇದೀಗ ನಾಳೆ ಕೊರೊನಾ ಆತಂಕದ ನಡುವೆ ಬರೆದಿದ್ದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಯಾವ ಜಿಲ್ಲೆ ಪ್ರಥಮವಾಗಲಿದೆ ಅನ್ನೋದು ತಿಳಿಯಲಿದೆ.