ಬೆಂಗಳೂರು:ಜೂನ್ 14ರಿಂದ 25ರವರೆಗಿನ ಅವಧಿಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗುವುದು. ಈ ಬಾರಿಯ ಪ್ರತಿಯೊಂದು ಪರೀಕ್ಷೆಗೆ 3 ಗಂಟೆ 15 ನಿಮಿಷಗಳ ಸಮಯಾವಕಾಶ ಇರಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಆರೋಗ್ಯ ಸಚಿವರ ಜೊತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಕಟಿಸಿದ ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯ ದಿನಾಂಕ ಹೀಗಿದೆ.
- ಜೂನ್ 14ರಂದು ಪ್ರಥಮ ಭಾಷೆ ಪರೀಕ್ಷೆ
- ಜೂನ್ 16ರಂದು ಗಣಿತ, ಸಮಾಜಶಾಸ್ತ್ರ ಪರೀಕ್ಷೆ
- ಜೂನ್ 18ರಂದು ದ್ವಿತೀಯ ಭಾಷೆ ಇಂಗ್ಲಿಷ್ ಅಥವಾ ಕನ್ನಡ ಪರೀಕ್ಷೆ
- ಜೂನ್ 21ರಂದು ವಿಜ್ಞಾನ ಪರೀಕ್ಷೆ
- ಜೂನ್ 23ರಂದು ತೃತೀಯ ಭಾಷೆ ಪರೀಕ್ಷೆ
- ಜೂನ್ 25ರಂದು ಸಮಾಜ ವಿಜ್ಞಾನ ಪರೀಕ್ಷೆ
ಇದರ ಜೊತೆಗೆ 6ರಿಂದ 8ನೇ ತರಗತಿಗಳಿಗೆ ಸಂಬಂಧಿಸಿದಂತೆ ವಿದ್ಯಾಗಮ ಮುಂದುವರೆಯಲಿವೆ. ಫೆಬ್ರುವರಿ 2021ರಲ್ಲಿ ತಾಂತ್ರಿಕ ಸಲಹಾ ಸಮಿತಿ ಇನ್ನೊಮ್ಮೆ ಸಭೆ ಸೇರಿ ಉಳಿದ ತರಗತಿಗಳನ್ನ ಪ್ರಾರಂಭಿಸುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಆಫ್ ಲೈನ್/ಆನ್ಲೈನ್ ಆಯ್ಕೆ ಮುಂದುವರೆಯಲಿದೆ. ಹಾಜರಾತಿ ಕಡ್ಡಾಯವಲ್ಲ ಎಂಬ ನಿರ್ಣಯ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಬಹುಮಾನದಿಂದಲೇ ಫೇಮಸ್ ಆಗಿದ್ದ ಕಡಬಗೆರೆ ಕ್ರಿಕೆಟ್ ಪಂದ್ಯಾವಳಿ ರದ್ದು
ಫೆಬ್ರವರಿ 1ರಿಂದ 9ನೇ ತರಗತಿಯಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಪೂರ್ಣಾವಧಿ ತರಗತಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಫೆಬ್ರವರಿ 1ರಿಂದ 9ನೇ ತರಗತಿ, 10ನೇ ತರಗತಿ ಹಾಗೂ 11, 12ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ. 1-5ನೇ ತರಗತಿ ಆರಂಭಿಸುವ ಬಗ್ಗೆ ಫೆಬ್ರವರಿ 2ನೇ ವಾರದಿಂದ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನು ಖಾಸಗಿ ಶಾಲೆಗಳ ಶುಲ್ಕ ನಿಗದಿ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರವಾಗಿಲ್ಲ. ಶುಲ್ಕ ನಿಗದಿ ಬಗ್ಗೆ ಪ್ರತ್ಯೇಕ ಸಲಹಾ ಸಮಿತಿ ಜೊತೆ ಚರ್ಚಿಸಬೇಕಿದೆ. ಆ ಬಳಿಕ ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.