ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಇಷ್ಟು ದಿನ ಕಾಂಗ್ರೆಸ್ ಪಕ್ಷ ಆಡುತ್ತಿದ್ದ ಮಾತನ್ನೇ ಇದೀಗ ರಾಜ್ಯ ಬಿಜೆಪಿ ಸರ್ಕಾರದ ಸಚಿವರು ಆಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸಚಿವ ಜೆ.ಸಿ. ಮಾಧುಸ್ವಾಮಿ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಆಡಿರುವ ಮಾತನ್ನು ಬೆಂಬಲಿಸಿದ್ದಾರೆ. ಇಷ್ಟು ದಿನ ಕಾಂಗ್ರೆಸ್ ಹೇಳುತ್ತಿದ್ದುದನ್ನೇ ಇವತ್ತು ರಾಜ್ಯ ಬಿಜೆಪಿ ಸರ್ಕಾರದ ಸಚಿವ ಜೆ.ಸಿ. ಮಾಧುಸ್ವಾಮಿ ಅವರೇ ಹೇಳುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿರುವ ರಾಷ್ಟ್ರೀಯ ಬಿಜೆಪಿ, ರಾಜ್ಯಗಳ ಸಾಂವಿಧಾನಿಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಸತ್ಯ ಹೇಳಿದ್ದಕ್ಕೆ ಮಾಧುಸ್ವಾಮಿಯವರಿಗೆ ಧನ್ಯವಾದಗಳು ಎಂದು ವಿವರಿಸಿದ್ದಾರೆ.
ರಾಜ್ಯಗಳ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಅತಿಕ್ರಮಣ ಮಾಡಿ, ಹಸ್ತಕ್ಷೇಪ ನಡೆಸುತ್ತಿದೆ. ಇದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ ಆತಂಕ ಎದುರಾಗಿದೆ ಎಂಬ ಸತ್ಯವನ್ನು ಮಾಧುಸ್ವಾಮಿ ಅವರು ಒಪ್ಪಿಕೊಂಡಿದ್ದಾರೆ. ಈ ಸತ್ಯ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ 26 ಸಂಸದರಿಗೂ ಅರ್ಥವಾಗಲಿ. ಒಕ್ಕೂಟ ವ್ಯವಸ್ಥೆಯನ್ನೇ ಬಿಜೆಪಿ ಸರ್ಕಾರ ಬುಡಮೇಲು ಮಾಡುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಕೃಷಿ ಕಾನೂನುಗಳೇ ಸಾಕ್ಷಿ. ರಾಜ್ಯಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಏಕಾಏಕಿ ತಿದ್ದುಪಡಿ ಮಾಡಿ ಅವುಗಳನ್ನು ಒಪ್ಪಿಕೊಳ್ಳುವಂತೆ ರಾಜ್ಯಗಳ ಮೇಲೆ ಬಿಜೆಪಿ ಸರ್ಕಾರ ಒತ್ತಡ ಹಾಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಜಾರಿಗೆ ತಂದ ಜಿಎಸ್ಟಿ ಕಾಯ್ದೆಯಿಂದಾಗಿ ಕರ್ನಾಟಕದಲ್ಲಿ 20 ಸಾವಿರ ಕೋಟಿಯಷ್ಟು ತೆರಿಗೆ ಸಂಗ್ರಹದ ಕೊರತೆಯಾಗಿದೆ. ನ್ಯಾಯವಾಗಿ ರಾಜ್ಯಗಳಿಗೆ ಸಲ್ಲಬೇಕಾದ ತೆರಿಗೆ ಪಾಲನ್ನು ನೀಡುತ್ತಿಲ್ಲ. ಇದೂ ಕೂಡ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ಕಾನೂನು. ರಾಜ್ಯಗಳಿಗೆ ಅನುಕೂಲವಾಗುವಂತಹ ಜಿಎಸ್ಟಿ ವ್ಯವಸ್ಥೆಯ ಅಗತ್ಯ ಇದೆ ಎಂದಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವುದೂ ಕೂಡ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನವೇ ಆಗಿದೆ. ವೈವಿಧ್ಯತೆಯನ್ನು ಹತ್ತಿಕ್ಕಿ ಆರ್ಎಸ್ಎಸ್ ಅಜೆಂಡಾವನ್ನು ದೇಶದ ಮೇಲೆ ಹೇರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.