ಬೆಂಗಳೂರು:ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದಾಗಿ 23ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆಯನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡ ಪರಿಣಾಮ 20ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಮೃತಪಟ್ಟಿರುವ ಸುದ್ದಿ ನಿಜಕ್ಕೂ ಆಘಾತಕಾರಿ. ಆಕ್ಸಿಜನ್ ಸಿಗದೇ ಮೃತಪಟ್ಟ ಕೊರೊನಾ ಸೋಂಕಿತರ ಸಾವು ಕೇವಲ ಸಾವಲ್ಲ, ಸರ್ಕಾರಿ ಪ್ರಾಯೋಜಿತ ಕೊಲೆ. 20ಕ್ಕೂ ಹೆಚ್ಚು ಸೋಂಕಿತರನ್ನು ಸರ್ಕಾರವೇ ಆಕ್ಸಿಜನ್ ಕೊಡದೆ ಕತ್ತು ಹಿಸುಕಿ ಕೊಂದಿದೆ. ಇದು ಸರ್ಕಾರದಿಂದಲೇ ನಡೆದಿರುವ ಸಾಮೂಹಿಕ ಮಾರಣಹೋಮ. ಸರ್ಕಾರ ಆಕ್ಸಿಜನ್ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದ್ದರ ಪರಿಣಾಮ ಇದು. ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ್ ಅವರೇ ನಿಮ್ಮ ಸರ್ಕಾರಕ್ಕೆ ಇನ್ನೆಷ್ಟು ಬಲಿ ಬೇಕು? ಎಂದು ಕೇಳಿದ್ದಾರೆ.