ಬೆಂಗಳೂರು :ರಾಜ್ಯದಲ್ಲಿ ಆರ್ಥಿಕ ಶಿಸ್ತು ಹಳಿ ತಪ್ಪಿದೆ. ಒಂದು ಕಡೆ ದುಂದು ವೆಚ್ಚ, ಮತ್ತೊಂದು ಕಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪರ್ಸಂಟೇಜ್ ಲೆಕ್ಕದಲ್ಲಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಧನವಿನಿಯೋಗ ವಿಧೇಯಕದ ಮೇಲೆ ಮಾತನಾಡಿದ ಅವರು, ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. 52,900 ಕೋಟಿ ರೂ. ಸಾಲ ಪಡೆದಿದ್ದಾರೆ. ಶೇ.5ರಷ್ಟು ವಿತ್ತೀಯ ಕೊರತೆ ಹೆಚ್ಚಿಸಿಕೊಂಡು 30 ಸಾವಿರ ಕೋಟಿ ಸಾಲವನ್ನು ಹೆಚ್ಚುವರಿ ಪಡೆದಿದೆ. ಶಕ್ತಿ ಮೀರಿ ಸಾಲ ಪಡೆಯಲು ಸರ್ಕಾರ ಹೋಗುತ್ತಿದೆ ಎಂದು ಟೀಕಿಸಿದರು.
ನೋಟ್ ಬ್ಯಾನ್ನಿಂದ ಜಿಡಿಪಿ ಕುಸಿಯುತ್ತಾ ಬಂತು, ಜಿಎಸ್ಟಿಯಿಂದಲೂ ಕುಸಿತವಾಗಿದೆ. ನಂತರ ನೆರೆ, ಕೊರೊನಾದಿಂದ ರಾಜ್ಯದ ಆರ್ಥಿಕ ಸ್ಥಿತಿ ಕೆಟ್ಟಿದೆ. 2009ರಲ್ಲಿ ಅಧಿಕಾರಕ್ಕೆ ಬಂದಿರಿ, ಉತ್ತರ ಕರ್ನಾಟಕದಲ್ಲಿ ಶತಮಾನದಲ್ಲಿ ಆಗದ ಪ್ರವಾಹ ಸಂಭವಿಸಿ, ಉತ್ತರ ಕರ್ನಾಟಕ ಕೊಚ್ಚಿ ಹೋಯಿತು.
2019ರಲ್ಲೂ ಅತಿವೃಷ್ಟಿಯಿಂದ 35 ಸಾವಿರ ಕೋಟಿ ಹಾನಿಯಾಗಿದ್ದು, ಈ ಬಾರಿಯೂ 25 ಸಾವಿರ ಕೋಟಿ ಹಾನಿ ಸಂಭವಿಸಿದೆ. ಒಟ್ಟಾರೆ ರಾಜ್ಯದ ಆರ್ಥಿಕ ಸ್ಥಿತಿಗತಿ ಸರಿಯಿಲ್ಲ ಎಂದರು. ಬೊಕ್ಕಸ ಬರಿದಾಗಿದ್ದರೂ ಕೂಡ ಸರ್ಕಾರ ದುಂದುವೆಚ್ಚಕ್ಕೆ ಕಡಿವಾಣ ಹಾಕಿಲ್ಲ. ಮನಸೋ ಇಚ್ಚೆ ಖರ್ಚು ಮಾಡುತ್ತಿದೆ.
ಈಗ ಯಾಕೆ ನಿಗಮ ಮಂಡಳಿ ಹೊಸದಾಗಿ ರಚಿಸಬೇಕಿತ್ತು? ರಚಿಸದಿದ್ದಲ್ಲಿ ಸರ್ಕಾರ ನಡೆಸಲು ಸಾಧ್ಯವಿರಲಿಲ್ಲವೇ? ಈಗ ಅವರಿಗೆಲ್ಲ ವೇತನ, ಖರ್ಚು, ಭತ್ಯೆ ಇತ್ಯಾದಿ ಕೊಡಬೇಕು. ಶಾಸಕ, ಪರಿಷತ್ ನಿಧಿ ಮೂರು ವರ್ಷದಿಂದ ಬಿಡುಗಡೆ ಆಗುತ್ತಿಲ್ಲ. ಅದಕ್ಕೆಲ್ಲ ಕೊರೊನಾ, ನೆರೆ ಅಂತಾ ಕಾರಣ ಹೇಳುತ್ತಾರೆ. ಆದರೆ, ದುಂದು ವೆಚ್ಚ ಮಾಡುತ್ತಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ಗೋಹತ್ಯೆ ನಿಷೇಧ ಮಸೂದೆಗೆ ಅಂಗೀಕಾರ ವೇಳೆ ನಡೆದ ವಾದ-ವಿವಾದ.. ವಿಡಿಯೋ
ಹಣ ಖರ್ಚು ಮಾಡುವಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಬಡವರ ಕಾರ್ಯಕ್ರಮಕ್ಕೆ ಹಣವೇ ಇಲ್ಲ, ಒಬಿಸಿ, ಅಲ್ಪಸಂಖ್ಯಾತ, ಎಸ್ಸಿ, ಎಸ್ಟಿ ಜನಾಂಗದ ಕಾರ್ಯಕ್ರಮಕ್ಕೆ ಹಣ ಕೊಡಲು ಆಗುತ್ತಿಲ್ಲ. ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾಗಿದೆ, ಜನರ ಕಲ್ಯಾಣ ಆಗಬೇಕಲ್ಲ. 1500 ಕೋಟಿ ಘೋಷಿಸಿ 150 ಕೋಟಿ ಕ್ರಿಯಾ ಯೋಜನೆ ಮಾಡಿದ್ದಾರೆ. ಆರ್ಥಿಕ ವರ್ಷ ಮುಗಿತಾ ಬಂದಿದೆ. ಒಂದು ರೂಪಾಯಿಯೂ ಹಣ ಖರ್ಚು ಮಾಡಿಲ್ಲ ಎಂದು ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.
ಹೊಟ್ಟೆಗೆ ಹಿಟ್ಟು ಇಲ್ಲದಾಗ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವಂತೆ, ನಿಗಮ ಮಂಡಳಿ ರಚಿಸಲಾಗಿದೆ. ಇವು ಒಂತರಾ ರಾಜಕಾರಣಿಗಳ ಪುನರ್ವಸತಿ ಸಂಸ್ಥೆಗಳಂತಾಗಿವೆ. ಇದಕ್ಕೆಲ್ಲ ಕೊಡುತ್ತಿರುವುದು ಬಡವರ ಹಣ, ಯಡಿಯೂರಪ್ಪಂದೂ ಅಲ್ಲ, ನಮ್ಮದೂ ಅಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಶಬ್ದಗಳೇ ಇಲ್ಲ, ಮಾತನಾಡಿದರೆ ನನ್ನ ನಾಲಿಗೆಯೇ ಹೊಲಸಾಗಲಿದೆ ಆ ರೀತಿ ಆಗಿದೆ.
ಸಾಲ ಮಾಡಿ ತುಪ್ಪ ತಿನ್ನುವಂತೆ ಸರ್ಕಾರ ಮಾಡುತ್ತಿದೆ. ಸರ್ಕಾರ ನಡೆಸಲಿಕ್ಕೇ ಶೇ.92ರಷ್ಟು ಹಣ ವ್ಯಯವಾಗುತ್ತಿದೆ. ಕಮಿಟೆಡ್ ಎಕ್ಸ್ಪೆಂಡಿಚರ್ ಇದೆ. ಹಾಗಾದರೆ ಅಭಿವೃದ್ಧಿ ಯೋಜನೆಗಳಿಗೆ ನೀಡಲು ಹಣ ಎಲ್ಲಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರೈತರು ಸುಮ್ಮನೆ ಪ್ರತಿಭಟನೆ ಮಾಡಿದಾಗಲೆಲ್ಲ ಹೋಗಲು ಆಗಲ್ಲ: ಬಿ.ಸಿ.ಪಾಟೀಲ್
ವಿದ್ಯುತ್, ನೀರು, ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಶೇ.25, ಇತರ ಕಡೆ ಶೇ.17.5ರಷ್ಟು ಬಿಲ್ ಹೆಚ್ಚಳ ಮಾಡಿದ್ದಾರೆ. ಶೇ.12ರಷ್ಟು ನೀರಿನ ಬಿಲ್ ಹೆಚ್ಚಳಕ್ಕೆ ಸಿದ್ಧತೆ ಮಾಡಿದ್ದಾರೆ. ಬಿಬಿಎಂಪಿ ಚುನಾವಣೆ ನಂತರ ಇದರ ಬರೆ ಎಳೆಯಲಿದ್ದಾರೆ. ಸದ್ಯ ಚುನಾವಣೆ ಇದೆ ಎಂದು ಸುಮ್ಮನಿದ್ದಾರೆ. ಸಲಾಕೆ ಕಾದಿದೆ, ಚುನಾವಣೆ ಮುಗಿಯುತ್ತಿದ್ದಂತೆ ಬರೆ ಎಳೆಯುತ್ತಾರೆ ಎಂದರು.
ಸಾಲದ ಪರಿ ನೋಡಿದರೆ ವಿತ್ತೀಯ ಕೊರತೆ ಮಿತಿ ಮೀರಿಹೋಗಲಿದ್ದಾರೆ ಎನಿಸುತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿ ಸರಿಯಿಲ್ಲ. ಚೇತರಿಸಿಕೊಳ್ಳುವುದು ಕಷ್ಟ, ಈ ಸ್ಥಿತಿಯಲ್ಲಿ ಆರ್ಥಿಕ ಶಿಸ್ತು ಸರಿಯಿಲ್ಲ. ಧನವಿನಿಯೋಗ ಎರಡನೇ ಕಂತು ಅನಿವಾರ್ಯವಿದೆ. ಮೂರನೇ ಕಂತು ನಿರೀಕ್ಷೆಗೂ ಮೀರಿ ಬರುವ ಸಾಧ್ಯತೆ ಇದೆ.
ದುಂದುವೆಚ್ಚ ಕಡಿಮೆ ಮಾಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಕಾಮಗಾರಿಗಳು, ಯೋಜನೆಗಳಲ್ಲಿ ಶೇ.60ರಷ್ಟು ಹಣ ವ್ಯರ್ಥ ಆಗಲಿದೆ. ಎಲ್ಲಾ ಶೇಕಡಾವಾರು ಲೆಕ್ಕಾಚಾರದಲ್ಲಿ ಹಣ ಬಳಕೆಯಾಗುತ್ತದೆ. ಕೆಳಗಿನಿಂದ ಮೇಲಿನವರೆಗೂ ಕಮೀಷನ್ ಹಂಚಿಕೆಯಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.