ಬೆಂಗಳೂರು: ಕೋವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಮೃತದೇಹಗಳ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಒಂದಿಲ್ಲೊಂದು ಎಡವಟ್ಟುಗಳು ಆಗುತ್ತಲೇ ಇವೆ. ಅದೇ ರೀತಿ ಕೊರೊನಾದಿಂದ ಮೃತ ವ್ಯಕ್ತಿಗಳ ದೇಹಕ್ಕೆ ಸ್ಯಾನಿಟೈಸ್ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಹಾಗಾದ್ರೆ ಸೋಂಕಿತರ ಶವ ಸಂಸ್ಕಾರದ ಸಂದರ್ಭದಲ್ಲಿ ವೈದ್ಯರು ಮಾಡಬೇಕಾದ ಕಾರ್ಯಗಳೇನು? ಮತ್ತು ಹೇಗೆಲ್ಲಾ ಸ್ಯಾನಿಟೈಸ್ ಮಾಡಬೇಕು? ಇಲ್ಲಿದೆ ಮಾಹಿತಿ.
ಶವ ಸಂಸ್ಕಾರದ ವೇಳೆ ಗುಂಪು ಸೇರುತ್ತಿರುವ ಕುಟುಂಬಸ್ಥರು, ಮೃತದೇಹಗಳನ್ನು ಕಸದಂತೆ ಎಸೆದು ಅಮಾನವೀಯವಾಗಿ ಅಂತ್ಯಕ್ರಿಯೆ ನಡೆಸಿದ್ದು, ಪಿಪಿಇ ಕಿಟ್ ಧರಿಸದೇ ಇರುವುದು ಸೇರಿ ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮಾಡಿರುವ ಎಡವಟ್ಟುಗಳು ಸುಮಾರಿವೆ. ಹಾಗೆಯೇ ಮೃತದೇಹಕ್ಕೆ ಸ್ಯಾನಿಟೈಸ್ ಮಾಡ್ತಿಲ್ಲ ಎಂಬ ಆರೋಪಗಳೂ ಇವೆ. ಹಾಗಾದ್ರೆ ಅಂತ್ಯಕ್ರಿಯೆ ವೇಳೆ ವೈದ್ಯಾಧಿಕಾರಿಗಳು ಮಾಡಬೇಕಿರುವುದು ಏನು?
ಕೋವಿಡ್ನಿಂದ ಮೃತ ವ್ಯಕ್ತಿಯ ಮೃತದೇಹಕ್ಕೆ ಸ್ಯಾನಿಟೈಸೇಷನ್ ಆಸ್ಪತ್ರೆಗಳಲ್ಲೇ ಮಾಡಲಾಗುತ್ತದೆ. ಆತನಿದ್ದ ಬೆಡ್ಗೆ ಸ್ಯಾನಿಟೈಸರ್ ಸಿಂಪಡಿಸಿ, ಅಲ್ಲೇ ಪ್ಯಾಕಿಂಗ್ ಮಾಡಲಾಗ್ತದೆ ಮತ್ತು ಬಿಳಿ ಹತ್ತಿ ಬಟ್ಟೆಯಲ್ಲಿ ಶವ ಸುತ್ತಲಾಗುತ್ತೆ. ಒಂದು ಲೀಟರ್ ನೀರಿಗೆ 250 ಎಂಎಲ್ ಸ್ಲೋಡಿಯಂ ಹೈಪೋಕ್ಲೋರೈಟ್ ಸೊಲ್ಯೂಷನ್ ಮಿಶ್ರಣ ಮಾಡಿರುವ ಬಟ್ಟೆಯಿಂದ ಒದ್ದೆ ಮಾಡಿ ದೇಹ ಮುಚ್ಚಲಾಗುತ್ತದೆ. ನಂತರ ಮೂರು ಲೇಯರ್ ಪ್ಲಾಸ್ಟಿಕ್ನಿಂದ ಸುತ್ತಲಾಗುತ್ತೆ. ಶವ ಹೂತ ಬಳಿಕವೂ ರಾಸಾಯನಿಕ ದ್ರಾವಣ ಸಿಂಪಡಿಸಲಾಗುತ್ತೆ. ಒಂದು ಮೃತದೇಹಕ್ಕೆ ಒಂದು ಲೀಟರ್ ಗಿಂತ ಹೆಚ್ಚಿನ ದ್ರಾವಣ ಬಳಸುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.