ಬೆಂಗಳೂರ :ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಯಾಗಿದ್ದ ವೇಳೆ ತಮಿಳುನಾಡಿನ ರಾಜಕಾರಣಿ ಶಶಿಕಲಾಗೆ ರಾಜಾತಿಥ್ಯ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧೀಖಾನೆ ಇಲಾಖೆ ಉಪನಿರ್ದೇಶಕಿ ಡಾ. ಅನಿತಾ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ರಾಜ್ಯ ಸರ್ಕಾರ ತಮ್ಮ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ಬಂದೀಖಾನೆ ಇಲಾಖೆಯ ಉಪನಿರ್ದೇಶಕಿ ಡಾ.ಅನಿತಾ ಆರ್. ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಟಿ ನರೇಂದ್ರ ಪ್ರಸಾದ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ತನ್ನ ಆದೇಶದಲ್ಲಿ ಪೀಠ, ಪ್ರಕರಣದ ತನಿಖೆಗೆ ಸರ್ಕಾರ ಆದೇಶಿಸಿದ್ದನ್ನು ಪ್ರಶ್ನಿಸಿ ಅರ್ಜಿದಾರರು 2018ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ ಮಾನ್ಯ ಮಾಡಿದೆ. ಜತೆಗೆ ಅರ್ಜಿದಾರರ ವಿರುದ್ಧದ ತನಿಖೆಯನ್ನು ರದ್ದುಪಡಿಸಿದೆ. ಈ ಆದೇಶವನ್ನು ಸರ್ಕಾರ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿಲ್ಲ.
ದೋಷಾರೋಪಣೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಸತ್ಯನಾರಾಯಣ ಅವರ ವಿರುದ್ಧವಷ್ಟೇ ಆರೋಪಗಳಿವೆ. ಅರ್ಜಿದಾರರ ವಿರುದ್ಧ ಆರೋಪಗಳಿಲ್ಲ. ಹಾಗಿದ್ದೂ ಪರಿಶೀಲಿಸದೆ ಅರ್ಜಿದಾರರ ವಿರುದ್ಧವೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ 2021ರ ಡಿ.30ರಂದು ಆದೇಶ ಹೊರಡಿಸಿದೆ. ಆದ್ದರಿಂದ, ಅರ್ಜಿದಾರರ ಕೋರಿಕೆಯಂತೆ ಮುಂದಿನ ವಿಚಾರಣೆವರೆಗೆ ಆದೇಶಕ್ಕೆ ತಡೆ ನೀಡಲಾಗಿದೆ ಎಂದು ತಿಳಿಸಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಯಾಗಿದ್ದ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾಗೆ ಲಂಚ ಪಡೆದು ರಾಜಾತಿಥ್ಯ ನೀಡಿದ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆ ನಡೆಸಲು ಆದೇಶಿಸಿತ್ತು. ಈ ವೇಳೆ ಡಾ.ಅನಿತಾ ತಮ್ಮ ವಿರುದ್ಧ ತನಿಖೆಗೆ ಆದೇಶಿಸಿರುವ ಕ್ರಮ ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದರು.
ಅರ್ಜಿಯನ್ನು ಕೆಎಟಿ ಮಾನ್ಯ ಮಾಡಿತ್ತು. ಇದನ್ನು ಸರ್ಕಾರವೂ ಪ್ರಶ್ನಿಸಿರಲಿಲ್ಲ. ಇತ್ತೀಚೆಗೆ ಆರೋಪಿತರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸುವ ವೇಳೆ ಡಾ. ಅನಿತಾರ ಹೆಸರನ್ನೂ ಸೇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆದೇಶ ರದ್ದು ಕೋರಿ ಡಾ. ಅನಿತಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ