ಬೆಂಗಳೂರು:ಕನ್ನಡ ಚಿತ್ರರಂಗದ ಶೋ ಮ್ಯಾನ್ ಎಂದು ಕರೆಯಿಸಿಕೊಂಡಿರುವ ನಟ ಕ್ರೇಜಿಸ್ಟಾರ್ ವಿ.ರವಿಚಂದ್ರನ್. ರಣಧೀರನಿಗೆ ಇಂದು 61ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರ ದ್ವಿತೀಯ ಪುತ್ರ ವಿಕ್ರಮ್ ನಟಿಸಿರುವ ಚಿತ್ರತಂಡ ಸಿಹಿಸುದ್ದಿ ಕೊಟ್ಟಿದೆ. ಹೌದು, ಜೂನ್ 24ರಂದು 'ತ್ರಿವಿಕ್ರಮ' ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ವಿಕ್ರಮ್ ನಾಯಕ ನಟನಾಗಿ ಎಂಟ್ರಿ ಕೊಡುತ್ತಿರುವ ಚೊಚ್ಚಲ ಸಿನಿಮಾ ಇದಾಗಿದೆ. ಪ್ರಾರಂಭದಿಂದಲೂ ಕ್ರೇಜಿ ಸ್ಟಾರ್ ಮಗನ ಸಿನಿಮಾಗೆ ಚಂದನವನದ ತಾರೆಯರು ಸಾಥ್ ನೀಡಿದ್ದಾರೆ. ಹೀಗಾಗಿ ಮಗನ ಜೊತೆಗಿರುವ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ, ಕನಸುಗಾರನಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲಾಗಿದೆ. ಪೋಸ್ಟರ್‌ನಲ್ಲಿ ಕ್ರೇಜಿಸ್ಟಾರ್ ಗಿಟಾರ್ ಹಿಡಿದು ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ.
ಕ್ರೇಜಿಸ್ಟಾರ್ ಹುಟ್ಟುಹಬ್ಬದ ಅಂಗವಾಗಿ ತ್ರಿವಿಕ್ರಮ ತಂಡ 'ಪ್ಲೀಸ್ ಮಮ್ಮ' ವಿಡಿಯೋ ಸಾಂಗ್ ಹರಿಬಿಟ್ಟಿದ್ದು, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಡು ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ. 'ರವಿ ಮತ್ತು ನಾನು ಒಟ್ಟಿಗೆ ಇಂಡಸ್ಟ್ರಿಗೆ ಬಂದವರು. ಆಗಿನಿಂದಲೂ ಒಳ್ಳೆಯ ಸ್ನೇಹಿತರು. ಈಗಾಗಲೇ ಮನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಹೀರೋ ಆಗಿ ವಿಕ್ಕಿ ಲಾಂಚ್ ಆಗ್ತಿರೋದು ಖುಷಿಯ ವಿಚಾರ. ಬಾಲನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡ ಅನುಭವವಿದೆ. ನನ್ನದೇ ನಟನೆಯ ಸಿನಿಮಾದಲ್ಲಿ ನನ್ನ ಚಿಕ್ಕ ವಯಸ್ಸಿನ ಪಾತ್ರ ನಿಭಾಯಿಸಿದ್ದಾರೆ. ನಾನು ಹಾಡು ಹಾಗೂ ಕೆಲವು ಸೀನ್ ನೋಡಿದ್ದೀನಿ. ವಿಕ್ಕಿ ಪಕ್ಕಾ ಮಾಸ್ ಲುಕ್ ಮತ್ತು ಚಾರ್ಮ್ ಇರುವಂಥ ನಟ. 'ತ್ರಿವಿಕ್ರಮ' ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಲಿ' ಎಂದು ಶಿವಣ್ಣ ಹಾರೈಸಿದ್ದಾರೆ.