ಬೆಂಗಳೂರು :ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವ ಆರೋಪ ಕುರಿತು ವಿಶೇಷ ತನಿಖಾ ಸಮಿತಿಯಿಂದ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಆರ್‌ಟಿನಗರದಲ್ಲಿರುವ ಸಿಎಂ ನಿವಾಸದ ಬಳಿ ಮಾತನಾಡಿದ ಅವರು, ಬೆಂಗಳೂರು ಸ್ಫೋಟ ಪ್ರಕರಣದ ರೂವಾರಿ ನಾಸಿರ್ಗೂ ರಾಜಾತಿಥ್ಯ ನೀಡಿರುವ ವಿಚಾರದ ಬಗ್ಗೆ ಅಧಿಕಾರಿಗಳನ್ನು ಕರೆದು ಕೇಳಿದ್ದೇನೆ, ನಾಸಿರ್ಗೆ ರಾಜಾತಿಥ್ಯ ನೀಡಿದ ವಿಚಾರವನ್ನು ಪೊಲೀಸರು ನಿರಾಕರಿಸಿದ್ದಾರೆ.
ಇತ್ತೀಚೆಗೆ ಆ ರೀತಿ ಏನೂ ನಡೆದಿಲ್ಲ ಅಂದಿದ್ದಾರೆ. ಹಳೆಯ ಫೋಟೋಗಳು ಹರಿದಾಡುತ್ತಿವೆ ಅಂತಾ ಹೇಳಿದ್ದಾರೆ. ಆದರೂ ಸಮಗ್ರ ವಿಚಾರಣೆ ಮಾಡಿ ವರದಿ ಕೊಡಲು ಹೇಳಿದ್ದೇನೆ. ವಿಶೇಷ ತನಿಖಾ ಸಮಿತಿ ನೇಮಿಸಿ ಇವತ್ತು ಆದೇಶ ಹೊರಡಿಸಲಾಗಿದೆ. ವಿಶೇಷ ತನಿಖಾ ಸಮಿತಿಯಿಂದ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.