ಬೆಂಗಳೂರು :ವಿಧಾನಮಂಡಲದ ಜಂಟಿ ಸದನಗಳನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಷಣದ ಕಾರ್ಯಕ್ರಮಕ್ಕೆ ವಿಪಕ್ಷ ಕಾಂಗ್ರೆಸ್ ಬಹಿಷ್ಕಾರ ಹಾಕಿದ್ದಕ್ಕೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬೇಸರ ವ್ಯಕ್ತಪಡಿಸಿದ್ದಾರೆ.
ಉಭಯ ಸದನಗಳ ಸದಸ್ಯರುಗಳನ್ನು ಉದ್ದೇಶಿಸಿ ಲೋಕಸಭಾ ಸ್ಪೀಕರ್ ಭಾಷಣಕ್ಕೂ ಮುನ್ನ ಮಾತನಾಡಿದ ಅವರು, ಪ್ರತಿಪಕ್ಷದ ಸದಸ್ಯರು ಇವತ್ತು ಈ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿರುವುದು ನಿಜವಾಗಿಯೂ ಮನಸಿಗೆ ಬೇಸರವಾಗಿದೆ. ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಸದಸ್ಯರು ಗೈರಾಗಿದ್ದಾರೆ.
ಸಂವಿಧಾನ ಬದ್ಧವಾಗಿರುವ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ನಾನು ಮತ್ತು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಈ ಸಭೆಯನ್ನು ಕರೆದಿದ್ದೇವೆ. ಲೋಕಸಭಾ ಸ್ಪೀಕರ್ ಭಾಗವಹಿಸಿರುವ ಕಾರ್ಯಕ್ರಮದಲ್ಲಿ ಅವರ ಗೈರು ಸರಿಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಭಾಗವಹಿಸಲ್ಲ ಎಂದು ಅವರು ಹೇಳಿದ್ದರು. ಅನೇಕ ಬಾರಿ ಅವರನ್ನು ನಾನು ವಿನಂತಿಸಿಕೊಂಡಿದ್ದೆ. ಆದರೂ ಅವರು ಬರಲಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಒಳ್ಳೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ಅಥವಾ ಸಂಸದೀಯ ವ್ಯವಸ್ಥೆ ಕೇವಲ ಆಡಳಿತ ಪಕ್ಷದಿಂದ ನಡೆಯಲ್ಲ. ಅದು ಪ್ರತಿಪಕ್ಷಗಳ ಪೂರ್ಣ ಸಹಕಾರದಿಂದಲೂ ನಡೆಯುತ್ತೆ. ಹಾಗಾಗಿ, ಸರ್ಕಾರ ಹಾಗೂ ಸದನಗಳನ್ನು ನಡೆಸಲು ಅವರ ಸಹಕಾರವೂ ಬೇಕು ಎಂದು ಹೇಳಿದರು.
'ಎಲ್ಲ ಕ್ಷೇತ್ರದಲ್ಲಿ ಮೌಲ್ಯಗಳ ಅಧಃಪತನದ ಬಗ್ಗೆ ಚರ್ಚೆ':
ಇದಕ್ಕೂ ಮೊದಲು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸ್ಪೀಕರ್ ಕಾಗೇರಿ ಅವರು, ಈ ಕಾರ್ಯಕ್ರಮ ಏಕೆ ಮಾಡುತ್ತಿದ್ದೀರಿ ಎಂದು ಹಲವರು ಪ್ರಶ್ನಿಸಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ಆದರ್ಶ, ಮೌಲ್ಯಗಳ ಅಧಃಪತನ ಆಗುತ್ತಿವೆ. ಈ ಬಗ್ಗೆ ನಾವು ಚರ್ಚೆ ನಡೆಸುತ್ತಿರುತ್ತೇವೆ. ಈ ನಿಟ್ಟಿನಲ್ಲಿ ಒಳ್ಳೆಯದನ್ನು ಮಾಡಬೇಕು ಎಂಬ ಪ್ರಯತ್ನವನ್ನ ಮಾಡುವ ಜವಾಬ್ದಾರಿ ಸ್ವೀಕರಿಸಬೇಕು ಎಂದರು.
ಸಮಾಜಕ್ಕೆ ನೇತೃತ್ವ ಕೊಡುವ ನಾವು ಈ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡಲಾಗಿದೆ. ಸಂವಿಧಾನದ ಬಗ್ಗೆ ಚರ್ಚೆ ಮಾಡಿರುವ ಮೊದಲ ವಿಧಾನಸಭೆ ಕರ್ನಾಟಕ. ಓಂ ಬಿರ್ಲಾ ಅತ್ಯಂತ ಪ್ರಭಾವಿಯಾಗಿ ಲೋಕಸಭೆ ನಿರ್ವಹಣೆ ಮಾಡುತ್ತಾರೆ. ಜಗತ್ತಿನಲ್ಲಿ ಭಾರತದ ಪ್ರಜಾಪ್ರಭುತ್ವ ಅತ್ಯುತ್ತಮ ಸಂಸದೀಯ ವ್ಯವಸ್ಥೆ. ತುರ್ತು ಪರಿಸ್ಥಿತಿ ಸಮಯ ಬಿಟ್ಟರೆ ಎಲ್ಲ ಸಂದರ್ಭದಲ್ಲಿ ಉತ್ತಮ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತ ನಡೆಸಿದ್ಧೇವೆ.