ಬೆಂಗಳೂರು:ಜೆಡಿಎಸ್ ಸದಸ್ಯರ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಗರಂ ಆದ ಘಟನೆ ವಿಧಾನಸಭೆ ಅಧಿವೇಶನದಲ್ಲಿಂದು ನಡೆಯಿತು. ಅಶಿಸ್ತಿನಿಂದ ನಡೆದುಕೊಳ್ಳುತ್ತಿರುವವರ ಪಟ್ಟಿ ನನ್ನ ಬಳಿ ಇದೆ. ನಾನಂತೂ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪೀಕರ್ ಎಚ್ಚರಿಕೆ ನೀಡಿದ್ದಾರೆ.
ಕೆಲ ಸದಸ್ಯರ ಅಶಿಸ್ತಿಗೆ ಸ್ಪೀಕರ್ ಫುಲ್ ಗರಂ ; ಕಠಿಣ ಕ್ರಮದ ಎಚ್ಚರಿಕೆ ನೀಡಿದ ಕಾಗೇರಿ ಶೂನ್ಯ ವೇಳೆಯಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಮಾತನಾಡುತ್ತಾ, 2021-22ರ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಅತ್ಯಂತ ಹಿಂದುಳಿದ ತಾಲೂಕಿಗೆ ಅವರ ಇಂಡೆಕ್ಸ್ ಪ್ರಕಾರ ಅನುಪಾತ ಕಳಿಸಿಕೊಟ್ಟು, ಯಾವ ರೀತಿ ಕಾರ್ಯಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. 979 ಕೋಟಿ ರೂ. ಅನುದಾನ ಜಲಸಂಪನ್ಮೂಲ ಇಲಾಖೆಯಿಂದ ವಿವಿಧ ವಿಭಾಗಗಳಿಗೆ ಹಂಚಿಕೆಯಾಗಿದೆ. ನಂಜುಡಪ್ಪ ವರದಿ ಆಧಾರದಲ್ಲಿ ಆಗಿರುವ ತಾಲೂಕುವಾರು ಇಂಡೆಕ್ಸ್ ಇದಾಗಿದೆ. ಆದರೆ, ಆಯಾ ತಾಲೂಕಿಗೆ ಕೊಟ್ಟ ಹಂಚಿಕೆಯಾದ ಅನುದಾನವನ್ನು ಬೇರೆ ಕಡೆ ವರ್ಗಾಯಿಸಲಾಗಿದೆ. ಆ ಅಧಿಕಾರ ಕೊಟ್ಟವರು ಯಾರು? ಹಿಂದುಳಿದವಲ್ಲದ ತಾಲೂಕಿಗೆ ಅನುದಾನ ಹಂಚಿಕೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಈ ವೇಳೆ ಸಚಿವರಿಂದ ಉತ್ತರಿಸುವಂತೆ ಜೆಡಿಎಸ್ ಸದಸ್ಯರು ಆಗ್ರಹಿಸಿದರು. ಸದನದಲ್ಲಿ ಗದ್ದಲ ಏರ್ಪಟ್ಟಿತು. ನಿಮಗೆ ಯಾರು ಶಿಸ್ತು ಕಲಿಸುವುದು? ನಿಮ್ಮ ಪಾರ್ಟಿ ಏಕೆ ಹೀಗೆ ಆಗಿದೆ? ಎಂದು ಬಂಡೆಪ್ಪರನ್ನು ಉಲ್ಲೇಖಿಸಿ ಸ್ಪೀಕರ್ ಗರಂ ಆದರು. ಆಗ ಸಿಟ್ಟಾದ ಬಂಡೆಪ್ಪ ಕಾಶೆಂಪೂರ, ಇದು ಮಹತ್ವದ ವಿಚಾರವಾಗಿದೆ. ಇದು ಯೋಜನಾ ಇಲಾಖೆಗೆ ಬರುತ್ತದೆ. ಉತ್ತರ ಕೊಡಿಸಿ ಎಂದು ಪಟ್ಟು ಹಿಡಿದರು.
ಹೀಗೆ ಅಸಭ್ಯವಾಗಿ ವರ್ತನೆಯಾದರೆ ನಮಗೆ ಬೇಜಾರ್ ಆಗುತ್ತದೆ. ಜಲಸಂಪನ್ಮೂಲ ಇಲಾಖೆಗೆ ಬರಲ್ಲ ಅಂತಿದ್ದೀರಾ. ಇದು ಯೋಜನಾ ಇಲಾಖೆಗೆ ಬರುತ್ತದೆ ಅಂತಿದ್ದೀರಾ. ಹೀಗಾಗಿ ಯೋಜನಾ ಸಚಿವರು ಇದ್ದಾರೆ ಕೇಳೋಣ ಎಂದು ಯೋಜನಾ ಇಲಾಖೆ ಸಚಿವ ಮುನಿರತ್ನಗೆ ಕೇಳಿದರು. ಸಚಿವ ಮುನಿರತ್ನ ಪ್ರತಿಕ್ರಿಯಿಸುತ್ತಾ, ನನಗೆ ಈ ವಿಚಾರವಾಗಿ ಮಾಹಿತಿ ಇಲ್ಲ. ಮಾಹಿತಿ ಪಡೆದು ಉತ್ತರ ಕೊಡುತ್ತೇನೆ ಎಂದು ಉತ್ತರಿಸಿದರು. ಇದಕ್ಕೆ ಸಮಾಧಾನಗೊಳ್ಳದ ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
'ಸಚಿವರಿಗೆ ಮಾಹಿತಿ ಇಲ್ಲ'
ಈ ವೇಳೆ ಸ್ಪೀಕರ್ ಕಾಗೇರಿ, ಅವಕಾಶ ಕೊಡಬೇಕೆಂದು ಶೂನ್ಯವೇಳೆಗೆ ಈ ವಿಚಾರವನ್ನು ಹಾಕಿದ್ದೇನೆ. ನಿಯಮದ ಪ್ರಕಾರ ಶೂನ್ಯ ವೇಳೆ ಪ್ತಸ್ತಾಪಿತ ವಿಚಾರವನ್ನು ಸಚಿವರು ಸಿದ್ಧರಿದ್ದರೆ ಉತ್ತರ ಕೊಡುತ್ತಾರೆ. ಇಲ್ಲವಾದರೆ ಉತ್ತರ ತರಿಸಿ ಕೊಡುತ್ತಾರೆ. ಸಚಿವರಿಗೆ ಮಾಹಿತಿ ಇಲ್ಲ. ಹಾಗಾಗಿ ಮಾಹಿತಿ ತರಿಸಿ ಕೊಡುತ್ತೇನೆ ಎಂದಿದ್ದಾರೆ. ಹೀಗಿದ್ದರೂ ಗದ್ದಲ ಉಂಟು ಮಾಡುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.
ಬಳಿಕ ಸಚಿವ ಮುನಿರತ್ನ, ಯಾವುದೇ ತಾರತಮ್ಯ ಮಾಡಿಲ್ಲ. ತಾರತಮ್ಯ ಆಗದ ರೀತಿಯಲ್ಲಿ ಸರಿಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರಿಸಿದರು.
ಅಶಿಸ್ತು ಪ್ರದರ್ಶಿಸುವ ಸದಸ್ಯರ ವಿರುದ್ಧ ಕ್ರಮ:
ಅಶಿಸ್ತಿಗೆ ಯಾರು ಯಾರು ಒಳಪಡುತ್ತಾರೆ ಎಂದು ನಾವು ಪಟ್ಟಿ ಮಾಡಿದ್ದೇವೆ. ಅದನ್ನು ಬಹಿರಂಗ ಮಾಡಬಾರದು ಎಂಬುದು ನನ್ನ ಅಭಿಪ್ರಾಯ. ಸಭಾಧ್ಯಕ್ಷ ಸ್ಥಾನಕ್ಕೆ ಅಗೌರವ ತೋರಿದರೆ ಆ ಪಟ್ಟಿಯನ್ನು ಬಹಿರಂಗ ಮಾಡಬೇಕಾಗುತ್ತದೆ. ಅಶಿಸ್ತಿನಿಂದ ವರ್ತಿಸುತ್ತಿರುವವರ ಪಟ್ಟಿ ನನ್ನ ಬಳಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕಾಂಗ ನಾಯಕರು ತಮ್ಮ ಶಾಸಕರಿಗೆ ಸದನದ ನಿಯಮಗಳು, ನಡವಳಿಕೆ ಬಗ್ಗೆ ತಿಳಿಸಿಕೊಡಿ. ನನಗೆ ಅಶಿಸ್ತಿನಿಂದ ಸದನ ನಡೆಸಲು ಸಾಧ್ಯವಿಲ್ಲ. ನಾನಂತೂ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಪೀಕರ್ ಎಚ್ಚರಿಕೆ ನೀಡಿದರು.