ಬೆಂಗಳೂರು:ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆಯ ಮೇಲೆ ನಡೆದ ಚರ್ಚೆಯ ವೇಳೆ ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ್ ಅವರು 19 ಲಕ್ಷ ಇವಿಎಂ ನಾಪತ್ತೆಯಾದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅವರು ಯಾವ ಆಧಾರದ ಮೇಲೆ ಹೇಳಿದ್ದಾರೆ ಎಂಬುದನ್ನು ಅವರಿಂದಲೇ ಸ್ಪಷ್ಟೀಕರಣ ಕೋರಿದ್ದೇನೆ. ಅವರು ಸ್ಪಷ್ಟನೆ ನೀಡಿದ ಬಳಿಕ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನ ಅತ್ಯಂತ ಯಶಸ್ವಿಯಾಗಿ ನಡೆದಿದೆ. 26 ದಿನ ಕಲಾಪ ನಡೆದಿದ್ದು, 116 ಗಂಟೆ ಕಲಾಪ ನಡೆದಿದೆ. ಅಧಿವೇಶನಗಳು ಚೆನ್ನಾಗಿ ನಡೆದರೆ ಜನಸಾಮಾನ್ಯರಲ್ಲಿ ವಿಶ್ವಾಸ ಹೆಚ್ಚಿಸಲು ಕಾರಣ ಆಗುತ್ತದೆ. ಆಯವ್ಯಯದ ಮೇಲೆ ಸಿಎಂ ಭಾಷಣ ಮಾಡಿದ ಮೇಲೆ ಸದಸ್ಯರು 23 ಗಂಟೆ ಚರ್ಚಿಸಿದ್ದಾರೆ.
ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ 27 ಗಂಟೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಸಚಿವರು ಉತ್ತರ ಕೊಟ್ಟಿದ್ದಾರೆ. ಸಮಿತಿಗಳ ವರದಿಗಳು, 13 ವಿಧೇಯಕಗಳ ಅಂಗೀಕಾರ, ನಿಯಮ 69 ರಡಿ 6 ಸೂಚನೆಗಳ ಚರ್ಚೆ ಮಾಡಲಾಗಿದೆ. 405 ಪ್ರಶ್ನೆಗಳಿಗೆ 355 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಶೂನ್ಯವೇಳೆಯಲ್ಲಿ 46 ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ವಿವರಿಸಿದರು.