ಬೆಂಗಳೂರು :ಸನಾತನ ಸಂಸ್ಕೃತಿಯಲ್ಲಿ ಭಗವದ್ಗೀತೆ ಶ್ರೇಷ್ಠ ಧರ್ಮಗ್ರಂಥವೆಂದು ನಾವು ಭಾವಿಸಿದ್ದೇವೆ. ಭಗವದ್ಗೀತೆಯಷ್ಟೇ ನಮ್ಮ ಸಂವಿಧಾನವೂ ಶ್ರೇಷ್ಠವಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ನಡೆದ ಸಂವಿಧಾನದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತು ಮೆಚ್ಚುವಂತೆ ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ. ಅಂಬೇಡ್ಕರ್ ಜೊತೆಗೆ ಸಂವಿಧಾನ ರಚನೆಗೆ ಕೊಡುಗೆ ನೀಡಿದ ಹಲವು ಮಹನೀಯರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಿದೆ ಎಂದರು.
ಸಂವಿಧಾನ ಸರ್ವರಿಗೂ ಸಮಾನತೆಯ ಅವಕಾಶ ನೀಡಿದೆ. ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ. ಇಂತಹ ಸಂವಿಧಾನದ ಮಹತ್ವದ ಬಗ್ಗೆ ದೇಶದ ಎಲ್ಲಾ ನಾಗರಿಕರಲ್ಲಿ ಅರಿವು ಮೂಡಿಸುವುದು ಸಂವಿಧಾನ ದಿನಾಚರಣೆಯ ಮೂಲ ಉದ್ದೇಶ ಎಂದು ಹೇಳಿದರು.
ನಿವೃತ್ತ ನ್ಯಾಯಮೂರ್ತಿ ಸುಭಾಷ್ ಅಡಿ ಮಾತನಾಡಿ, ಸಂವಿಧಾನ ದಿನಾಚರಣೆ ಕೇವಲ ಸಭೆಗೆ ಸೀಮಿತ ಆಗಬಾರದು. 9,10ನೇ ತರಗತಿಯ ಪಠ್ಯಪುಸ್ತಕವಾಗಿ ಬರಬೇಕು. ಸಂವಿಧಾನ ಹಕ್ಕು ಜೊತೆಗೆ ಕರ್ತವ್ಯ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.