ಬೆಂಗಳೂರು: ಅಡ್ಡಾದಿಡ್ಡಿ ತಿರುಗಾಡುತ್ತಿದ್ದ ಮಗನಿಗೆ ಕೆಲಸಕ್ಕೆ ಹೋಗುವಂತೆ ಪೋಷಕರು ಬೈದು ಬುದ್ದಿ ಹೇಳಿದಕ್ಕೆ ಕೋಪಗೊಂಡ ಆತ ಚಾಕು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜಗಜೀವನ್ ರಾಮ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
23 ವರ್ಷದ ಸೈಯದ್ ಸಾಹೀಲ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಜೆ.ಜೆ.ರಾಮ್ ನಗರ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ಮೃತನ ಕುಟುಂಬ ವಾಸವಾಗಿತ್ತು. ಪೋಷಕರಿಗೆ ಮೂವರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳು ಸೇರಿ ಐವರ ಮಕ್ಕಳಿದ್ದು, ಈ ಪೈಕಿ ಸೈಯದ್ ಮೂರನೇಯವನಾಗಿದ್ದ.
ಗುಜರಿ ಕೆಲಸಕ್ಕಾಗಿ ಹೋಗುತ್ತಿದ್ದ ಸೈಯದ್ ದುಶ್ಚಟ್ಟಕ್ಕೆ ಒಳಗಾಗಿ ಏರಿಯಾ ಹುಡುಗರೊಂದಿಗೆ ಸೇರಿಕೊಂಡು ಓಡಾಡಿಕೊಂಡಿದ್ದ. ಮಗನ ನಡವಳಿಕೆ ಕಂಡು ಹಲವು ಬಾರಿ ಪೋಷಕರು ತಿಳಿವಳಿಕೆ ಹೇಳಿದ್ದರು. ಇಷ್ಟಾದರೂ ಮಾತು ಕೇಳದ ಆತ ನಿನ್ನೆ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಕುಳಿತಿರುವಾಗ ತಂದೆ ಬೈದು ಬುದ್ದಿ ಹೇಳಿದ್ದಾರೆ. ಇದರಿಂದ ಅಸಮಾಧಾನಗೊಂಡು ಅಡುಗೆ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಚಾಕುವಿನಿಂದ ಚುಚ್ಚಿಕೊಂಡು ತನ್ನನ್ನು ಕೆಲಸಕ್ಕೆ ಹೋಗುವಂತೆ ಬಲವಂತ ಮಾಡದಂತೆ ತಾಯಿ ಎದುರು ಕೂಗಾಡಿದ್ದ.
ಇದನ್ನೂ ಓದಿ: ಕೋವಿಡ್ ಭೀತಿ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಇಬ್ಬರು ಸಾವು!
ರಕ್ತಸ್ರಾವವಾಗುವುದನ್ನು ಕಂಡು ತಾಯಿ ಪ್ಲಾಸ್ಟರ್ ಹಾಕಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಕೆಲ ಹೊತ್ತಿನ ಬಳಿಕ ನೋವಿನಿಂದ ಬಳಲುತ್ತಿರುವುದನ್ನು ಕಂಡು ಪೋಷಕರು ಹೊಸನಗರ ಬಳಿಯ ಮಣಿಪಾಲ್ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ನಸುಕಿನ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.