ಬೆಂಗಳೂರು: ಕೋವಿಡ್ ಸೋಂಕಿತರು ಅತೀಯಾದ ಸ್ಟಿರಾಯ್ಡ್ ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಬ್ಲಾಕ್ ಫಂಗಸ್‌ಗೆ ತುತ್ತಾಗುವುದಕ್ಕೆ ಇದು ಒಂದು ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ, ಇದರ ಬಳಕೆಗೆ ಸೂಕ್ತ ಕಡಿವಾಣ ಹಾಕಬೇಕಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಇಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡ್ರಗ್ಸ್ ಲಾಜಿಸ್ಟಿಕ್ಸ್ ಸೊಸೈಟಿಯಧಿಕಾರಿಗಳ ಜೊತೆಗೆ ಸಚಿವ ಆರ್ ಅಶೋಕ್ ಕೋವಿಡ್ ಔಷಧಿ ಲಭ್ಯತೆ ಕುರಿತಂತೆ ಪರಾಮರ್ಶೆ ಸಭೆ ನಡೆಸಿದರು.
ಈ ವೇಳೆ ಸ್ಟಿರಾಯ್ಡ್ ಬಳಕೆಯ ಕುರಿತಂತೆ ಸೂಕ್ತ ಮಾರ್ಗಸೂಚಿಯನ್ನ ಹೊರಡಿಸಬೇಕಿದೆ. ಇಂದು ಹೋಮ್ ಐಸೋಲೇಷನ್ ಕಿಟ್ ನಲ್ಲಿಯೂ ಕೂಡ ಸ್ಟಿರಾಯ್ಡ್ ಮಾತ್ರೆಗಳನ್ನ ಇಟ್ಟು ಕೊಡಲಾಗುತ್ತಿದೆ.
ಇದರ ಬಳಕೆಯನ್ನ ಆಸ್ಪತ್ರೆಗಳಲ್ಲಿ ಅದು ವೈದ್ಯರ ಸೂಚನೆಯ ಮೇರೆಗೆ ಮಾತ್ರ ಬಳಸುವಂತೆ ಸೂಚಿಸಬೇಕು. ಹಾಗೆಯೇ ವಿಶ್ವಾರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನ ಅನುಸರಿಸುವುದರ ಜೊತೆಗೆ ಕೆಲ ನಿರ್ಬಂಧನೆಗಳನ್ನು ಹಾಕಬೇಕಿದೆ ಎಂದು ಹೇಳಿದರು.