ಕರ್ನಾಟಕ

karnataka

ETV Bharat / city

ಮಹಾಲಕ್ಷ್ಮಿ ಲೇಔಟ್​ನಲ್ಲಿ ಸೋಮಣ್ಣ ಬಿರುಸಿನ ಪ್ರಚಾರ: ಸಿದ್ದು ವಿರುದ್ಧ ವಾಗ್ದಾಳಿ - ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಚುನಾವಣಾ ಪ್ರಚಾರ

ಉಪಚುನಾವಣೆಯಿಂದಾಗಿ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್​ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕ ಗೋಪಾಲಯ್ಯ ಪರ ಸಚಿವ ವಿ. ಸೋಮಣ್ಣ ಬಿರುಸಿನ ಪ್ರಚಾರ ನಡೆಸಿದರು.

ಸೋಮಣ್ಣ ಉಪಚುನಾವಣೆ ಪ್ರಚಾರ

By

Published : Nov 23, 2019, 5:01 PM IST

ಬೆಂಗಳೂರು: ನಿನ್ನೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ನೇತೃತ್ವದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ, ಇಂದು ವೃಷಭಾವತಿ ನಗರದಲ್ಲಿ ಪ್ರಚಾರ ನಡೆಸಿದರು. ಮನೆಮನೆಗೆ ತೆರಳಿ ಮತಹಾಕಿ ಗೆಲ್ಲಿಸಿ ಎಂದು ಮತಯಾಚನೆ ಮಾಡಿದರು.

ಸೋಮಣ್ಣ ಉಪಚುನಾವಣಾ ಪ್ರಚಾರ

ಇನ್ನೊಂದೆಡೆ ವಾರ್ಡ್ ನಂಬರ್ 74 ರಲ್ಲಿ ಸಚಿವ ವಿ ಸೋಮಣ್ಣ, ಮಾಜಿ ಉಪಮೇಯರ್ ಹರೀಶ್ ಜೊತೆ ಪ್ರಚಾರ ನಡೆಸಿದರು‌. ಈ ವೇಳೆ ಮಾತನಾಡಿದ ಸೋಮಣ್ಣ, ನನಗೆ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜವಾಬ್ದಾರಿ ನೀಡಿದ್ದಾರೆ. ಹೀಗಾಗಿ ಇಂದು ಸಾಂಕೇತಿಕವಾಗಿ ಎಲ್ಲ ಮುಖಂಡರ ಜೊತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡ್ತಿದ್ದೇನೆ. ಕೇಂದ್ರದಲ್ಲಿ ಮೋದಿಯವರ ಸರ್ಕಾರ ಇದೆ. ರಾಜ್ಯದಲ್ಲಿ ಇನ್ನೂ ಮೂರುವರೆ ವರ್ಷ ಯಡಿಯೂರಪ್ಪ ‌ನೇತೃತ್ವದ ಸರ್ಕಾರ ಇರಬೇಕು. ಗೋಪಾಲಯ್ಯ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿ ಮಾಡಿ ಮಾದರಿ ಕ್ಷೇತ್ರ ಮಾಡುವಂತಾಗಲಿ. ಜನರಿಂದಲೂ‌ ಒಳ್ಳೆಯ ಸ್ಪಂದನೆ‌ ಸಿಗುತ್ತಿದೆ ಎಂದರು.

ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಸೋಮಣ್ಣ, ಸಿದ್ಧರಾಮಯ್ಯನವರು ಹತಾಶರಾಗಿದ್ದಾರೆ, ಒಬ್ಬಂಟಿಗರಾಗಿದ್ದಾರೆ. ಯಾವಾಗ, ಯಾರು, ಯಾವ್ಯಾವ ರೀತಿ, ಎಲ್ಲೆಲ್ಲಿ ಸಿದ್ದರಾಮಯ್ಯ ಅವರನ್ನು ದಡ ತಲುಪಿಸ್ತಾರೋ ಗೊತ್ತಿಲ್ಲ ಎಂದರು.

ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಹೆಚ್​.ಡಿ. ಕುಮಾರಸ್ವಾಮಿ, ನಿರ್ಮಲಾನಂದ ಸ್ವಾಮೀಜಿಯವರಲ್ಲಿ ಬೆಂಬಲ ಕೇಳಿದ್ದಾರೆ. ಒಕ್ಕಲಿಗ ಮುಖ್ಯಮಂತ್ರಿಯನ್ನು ಕೆಳಗಿಳಿಸಿದವರನ್ನು ಗೆಲ್ಲಿಸಬೇಡಿ ಎಂದಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ವಿ.ಸೋಮಣ್ಣ, ಆದಿಚುಂಚನಗಿರಿ ಜಾತ್ಯಾತೀತ ಮಠ. ಯಡಿಯೂರಪ್ಪನವರಿಗೂ ಇಪ್ಪತ್ತು ತಿಂಗಳು ಅಧಿಕಾರ ಕೊಡ್ತೇವೆ ಅಂತ ಯಾರು ಮೋಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಬೆಂಗಳೂರು ಕಾಸ್ಮೋಪಾಲಿಟನ್ ಸಿಟಿ. ಇಲ್ಲಿ ಒಂದು ಸಮಾಜಕ್ಕೆ ಸೀಮಿತವಾದ ಜನ ಇಲ್ಲ ಎಂದರು.

ಇದೇ ವೇಳೆ ಅಭ್ಯರ್ಥಿ ಗೋಪಾಲಯ್ಯ ಮಾತನಾಡಿ, ರಾಜಕಾರಣಕ್ಕೆ ಬಂದಾಗಿನಿಂದ ಜನರ ಮಧ್ಯದಲ್ಲಿ ಇದ್ದೇನೆ. ಪ್ರತಿ ರಸ್ತೆ, ಬಡಾವಣೆಗಳಲ್ಲಿ ನಿಮ್ಮ ಜೊತೆ ಇದ್ದೇವೆ ಎಂದು ಜನ ಹೇಳುತ್ತಿದ್ದಾರೆ. ತಂಡೋಪತಂಡವಾಗಿ ಮತ ಕೇಳುತ್ತಿದ್ದೇವೆ. ಗೋಪಾಲಯ್ಯ ನಮಗೆ ಬೇಕು, ನಾವು ನೆಮ್ಮದಿಯಿಂದ ಇರುತ್ತೇವೆ ಅಂತ ಜನ ಅಂತಿದ್ದಾರೆ. ನನಗೆ ವಿಶ್ವಾಸ ಇದೆ ಸಾಯೋವರೆಗೂ ಕ್ಷೇತ್ರದ ಜನರ ಜೊತೆ ಇರ್ತೀನಿ. ಜನರ ಪ್ರೀತಿ ವಿಶ್ವಾಸ ನನ್ನ ಜೊತೆ ಇದೆ ಎಂದರು.

ABOUT THE AUTHOR

...view details