ಬೆಂಗಳೂರು: ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ಜನ ರಸ್ತೆಗಿಳಿಯಲು ಶುರು ಮಾಡಿದ್ದು, ಸಂಚಾರಿ ನಿಯಮವನ್ನೂ ಪಾಲಿಸುತ್ತಿಲ್ಲ, ಸಾಮಾಜಿಕ ಅಂತರವೂ ಲೆಕ್ಕಕ್ಕಿಲ್ಲ ಕೊರೊನಾ ಜಾಗೃತಿಯಿಲ್ಲದೇ ಜನ ಮನಬಂದಂತೆ ತಿರುಗಾಡುತ್ತಿದ್ದಾರೆ.
ಲಾಕ್ಡೌನ್ನಿಂದ ಸ್ವಲ್ಪ ಸಡಿಲಿಕೆ ಸಿಕ್ಕಿದ್ದೆ ಸಾಕಾಯ್ತು ಜನರು ಕೊರೊನಾ ಭೀತಿ ಲೆಕ್ಕಿಸದೇ ಸಂಚಾರ ಶುರು ಮಾಡಿದ್ದಾರೆ. ಬೈಕ್ಗಳಲ್ಲಿ ಒಬ್ಬರು ಮಾತ್ರ ಸಂಚಾರ ಮಾಡಬೇಕು ಎನ್ನುವ ನಿಯಮ ಇದ್ದರೂ ಕೂಡ ಡಬ್ಬಲ್,ತ್ರಿಬಲ್ ರೈಡಿಂಗ್ ಶುರು ಮಾಡಿಬಿಟ್ಟಿದ್ದಾರೆ. ಸಿಗ್ನಲ್, ಪೊಲೀಸ್ ಎಲ್ಲಾ ಇದ್ದರೂ ಕೆಲವರಿಗೆ ಯಾವುದೂ ಲೆಕ್ಕಕ್ಕೆ ಇಲ್ಲ, ದ್ವಿಚಕ್ರ ವಾಹನದಲ್ಲಿ ಮೂರು ಮೂರು ಜನ ಎಗ್ಗಿಲ್ಲದೇ ಸಂಚರಿಸುತ್ತಾ ಸಂಚಾರಿ ನಿಯಮ ಹಾಗು ಲಾಕ್ಡೌನ್ ಮಾರ್ಗಸೂಚಿ ಎರಡೂ ಉಲ್ಲಂಘನೆ ಮಾಡುತ್ತಿದ್ದಾರೆ.
ಇನ್ನು ಕೆಲವರಿಗಂತೂ ಹೆಲ್ಮೆಟ್ ನಿಯಮ ಅನ್ವಯವೇ ಇಲ್ಲದಂತಾಗಿದೆ. ಕೊರೊನಾ ಲಾಕ್ಡೌನ್ ಹಿನ್ನಲೆಯಲ್ಲಿ ಪೊಲೀಸರು ವಾಹನಗಳ ತಪಾಸಣೆ, ಕುಡಿದು ವಾಹನ ಚಲಾಯಿಸುವವರ ತಪಾಸಣೆ ನಿಲ್ಲಿಸಿರುವ ಕಾರಣ ಇದರ ದುರುಪಯೋಗಪಡಿಸಿಕೊಂಡು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಇಲ್ಲದೇ ವಾಹನಗಳನ್ನು ಚಲಾಯಿಸುತ್ತಿದ್ದಾರೆ. ಸಿಗ್ನಲ್ ಗಳಲ್ಲಂತೂ ಜನರಿಗೆ ಕಾಯುವ ವ್ಯವದಾನವೇ ಇಲ್ಲದಂತಾಗಿದೆ, ಗ್ರೀನ್ ಸಿಗ್ನಲ್ ಬರುವ ಮೊದಲೇ ಜನರು ಸಿಗ್ನಲ್ ಜಂಪ್ ಮಾಡುತ್ತಿದ್ದಾರೆ.ಸಾಮಾಜಿಕ ಅಂತರದ ಪಾಲನೆ ಕೂಡ ಲಾಕ್ಡೌನ್ ಸಡಿಲಿಕೆ ನಂತರ ಕಡಿಮೆಯಾಗುತ್ತಿದೆ. ಕೊರೊನಾ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರಕ್ಕೆ ಪ್ರಥಮ ಆಧ್ಯತೆ ನೀಡಲಾಗಿದೆ ಆದರೆ ಈಗ ಸಿಗ್ನಲ್ಗಳಲ್ಲಿ ಜನರ ಅಕ್ಕಪಕ್ಕದಲ್ಲೇ ಒಂದರಿಂದ ಎರಡು ನಿಮಿಷ ನಿಲ್ಲಬೇಕಿದೆ. ಕಾರುಗಳಿಗೆ ಇದು ಅಷ್ಟಾಗಿ ಪರಿಣಾಮ ಬೀರದೇ ಇದ್ದರು ದ್ಚಿಚಕ್ರ ವಾಹನ ಸವಾರರ ಸಾಮಾಜಿಕ ಅಂತರ ನಿಯಮದ ಸ್ಪಷ್ಟ ಉಲ್ಲಂಘನೆ ಆಗುತ್ತಿದೆ. ಬೈಕ್ಗಳಲ್ಲಿ ಎರಡು, ಮೂರು ಜನ ಸಂಚರಿಸುತ್ತಿರುವುದರಿಂದಲೇ ಸಾಮಾಜಿಕ ಅಂತರದ ನಿಯಮ ಉಲ್ಲಂಘನೆ ಆಗುತ್ತಿದೆ. ಲಾಕ್ಡೌನ್ ಸಡಿಲಿಕೆಯಿಂದ ಬೈಕ್ ಸವಾರರು ಮೈಮರೆಯುತ್ತಿದ್ದಾರಾ? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.ಹೊರಗಡೆ ಸಂಚರಿಸುವಾಗ ಮಾಸ್ಕ್ ಕಡ್ಡಾಯ ಎಂದು ಆದೇಶ ಹೊರಡಿಸಿದ್ದರೂ ಕೂಡ ಜನರು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಮಾಸ್ಕ್ ಧರಿಸಿದ್ದರೂ ಅದು ಮುಖದ ಬದಲು ಜನರು ಕುತ್ತಿಗೆ ಸೇರಿರುತ್ತದೆ. ಇದನ್ನೆಲ್ಲಾ ನೋಡಿದರೆ ಕೊರೊನಾದ ಭೀತಿ ಜನರನ್ನು ಇನ್ನು ಜಾಗೃತಗೊಳಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.ಒಟ್ಟಿನಲ್ಲಿ ಲಾಕ್ ಡೌನ್ ಸಡಿಲಿಕೆ ಎನ್ನುವುದು ಸಾಮಾಜಿಕ ಅಂತರ ಪಾಲನೆಗೆ ವ್ಯತಿರಿಕ್ತವಾಗಿದೆ, ಜನರು ಕೊರೊನಾ ಮುಂಜಾಗ್ರತಾ ಕ್ರಮವನ್ನು ಲೆಕ್ಕಿಸದೇ ರಸ್ತೆಗಿಳಿಯುತ್ತಿರುವುದು ವಿಪರ್ಯಾಸವಾಗಿದೆ. ಇನ್ನಾದರೂ ಸ್ವಯಂ ಪ್ರೇರಿತರಾಗಿ ಜನರು ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಬೇಕಿದೆ.