ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿನ ಸಣ್ಣ ಕಾಮಗಾರಿಗಳ ಪ್ಯಾಕೇಜ್ ಪದ್ಧತಿಯನ್ನು ರದ್ದುಗೊಳಿಸುವಂತೆ ಸಣ್ಣ ಗುತ್ತಿಗೆದಾರರು ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ. ತಮ್ಮ ಮನವಿ ಪತ್ರದಲ್ಲಿ ಸಣ್ಣ ಕಾಮಗಾರಿಗಳನ್ನು ಪ್ಯಾಕೇಜ್‌ಗಳಾಗಿ ಮಾಡಿ ಹಣ ಮಾಡುವ ಉದ್ದೇಶವನ್ನು ದೊಡ್ಡ ಗುತ್ತಿಗೆದಾರರು ಹೊಂದಿರುತ್ತಾರೆ. ಆದ್ದರಿಂದ ಪ್ಯಾಕೇಜ್ ಪದ್ಧತಿಯನ್ನು ರದ್ದು ಮಾಡಿ ನಮ್ಮಂತಹ ಸಣ್ಣ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಪ್ಯಾಕೇಜ್ ಪದ್ಧತಿಯನ್ನು ರದ್ದುಪಡಿಸದೇ ಹೋದಲ್ಲಿ ನೊಂದ ಗುತ್ತಿಗೆದಾರರು ಉಗ್ರ ಸ್ವರೂಪದ ಹೋರಾಟ ನಡೆಸಲಿದ್ದಾರೆ. ಆ ಸಮಯದಲ್ಲಿ ಆಗುವ ಎಲ್ಲ ಅನಾಹುತಗಳಿಗೆ ತಾವೇ ಹೊಣೆಗಾರರು ಆಗುತ್ತೀರಿ ಎಂದು ಸಣ್ಣ ಗುತ್ತಿಗೆದಾರರು ಎಚ್ಚರಿಕೆ ರವಾನಿಸಿದ್ದಾರೆ.
ನಾವು ಸಣ್ಣ ಗುತ್ತಿಗೆದಾರರು, ಜಲ ಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಥಣಿ ವಿಭಾಗ (R&R) ಮತ್ತು HBC ಯಲ್ಲಿ ಕರೆದ ಹೊಲಗಾಲುವೆ (ಎಫ್‌ಐಸಿ) ಕಾಮಗಾರಿಗಳ ಟೆಂಡರಗಳಿಗೆ ಸಾಲ ಸೂಲ ಮಾಡಿ ಟೆಂಡರ್ ಅರ್ಜಿ ಶುಲ್ಕ ಹಾಗೂ ಇಎಂಡಿ ಹಣವನ್ನು ಕಟ್ಟಿರುತ್ತೇವೆ. ಈಗ ಜಲಸಂಪನ್ಮೂಲ ಸಚಿವರು, ಸಣ್ಣ ಕಾಮಗಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಈ ಎಲ್ಲಾ ಸಣ್ಣ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಲು ಆದೇಶಿಸಿರುತ್ತಾರೆ ಎಂದು ದೂರಿದ್ದಾರೆ.
ಜಲಸಂಪನ್ಮೂಲ ಸಚಿವರಿಗೂ ಮನವಿ:ಇದೇ ವೇಳೆ ವಿಜಯಪುರದಿಂದ ಬಂದಿದ್ದ ಐದಕ್ಕೂ ಹೆಚ್ಚು ಗುತ್ತಿಗೆದಾರರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿ ಬರುವ ಆರ್ ಆ್ಯಂಡ್ ಆರ್ / ಹೆಚ್ ಬಿ ಸಿ (ಹಿಪ್ಪರಗಿ ಬ್ಯಾರೇಜ್ ಕೆನಲ್) ವಿಭಾಗದಲ್ಲಿ ಎಫ್ ಐ ಸಿ ಟೆಂಡರ್ ರದ್ದು ಮಾಡಿರುವ ಬಗ್ಗೆ ದೂರು ನೀಡಿದ್ದಾರೆ.