ಬೆಂಗಳೂರು: ಬೆಂಗಳೂರಿನ ಹಲವೆಡೆ ಮಳೆ ಅವಾಂತರದಿಂದ ನಗರದ ಖ್ಯಾತಿಗೆ ಧಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಮುಖ್ಯಮಂತ್ರಿಗಳು, ಬಿಜೆಪಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ಪತ್ರ ಬರೆದಿದ್ದು, ಬೆಂಗಳೂರಿಗೆ ಇರುವ ಬ್ರ್ಯಾಂಡ್ ಅನ್ನು ಉಳಿಸಿಕೊಳ್ಳುವ ಕುರಿತು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಕಳವಳ: ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರಂತರ ಮುಂಗಾರು ಪೂರ್ವ ಮಳೆಯಾಗುತ್ತಿದ್ದು, ಹಲವು ಅವಾಂತರಗಳು ಘಟಿಸಿ ಜನಜೀವನಕ್ಕೆ ತೀವ್ರ ತೊಂದರೆಯನ್ನು ಉಂಟುಮಾಡಿದೆ. ಅದರಲ್ಲೂ ವಿಶ್ವದಲ್ಲಿನ ವೇಗದ ಬೆಳವಣಿಗೆಗಳ ನಗರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ನಗರದಲ್ಲಿನ ಮಳೆ ಅನಾಹುತಗಳು ಆತಂಕ ಹುಟ್ಟಿಸಿದೆ. ಇದು 'ಬ್ರ್ಯಾಂಡ್ ಬೆಂಗಳೂರು' ಹೆಸರಿಗೆ ಹಿನ್ನೆಡೆ ತರುವ ಆತಂಕ ಸೃಷ್ಟಿಸಿದೆ ಎಂದು ಎಸ್ಎಂ ಕೃಷ್ಣ ಕಳವಳ ವ್ಯಕ್ತಪಡಿಸಿದ್ದಾರೆ.
ಸಲಹೆ:ಮಳೆಹಾನಿಯಿಂದ ಭವಿಷ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ರಾಜ್ಯಕ್ಕೆ ಬಂಡವಾಳ ಹೂಡುವ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಪರಿಣಾಮ, ಇಲ್ಲಿ ಪ್ರತಿಷ್ಠಾಪನೆಗೊಳ್ಳಬಹುದಾದ ಕೈಗಾರಿಕೆಗಳು ಬೇರೆ ರಾಜ್ಯಗಳ ಪಾಲಾಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಆತಂಕ ವ್ಯಕ್ತಪಡಿಸಿ ಕೆಲ ಸಲಹೆಗಳನ್ನು ನೀಡಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಆದ್ಯತೆ ನೀಡಿ ವಿಪುಲ ಅವಕಾಶಗಳನ್ನು ನೀಡಿದ್ದರಿಂದ ಅಮೆರಿಕದ ಕ್ಯಾಲಿಫೋರ್ನಿಯಾ ನಗರದ ಸಿಲಿಕಾನ್ ವ್ಯಾಲಿಗೆ ಪರ್ಯಾಯವಾಗಿ ಬೆಂಗಳೂರು ನಗರ ಬೆಳೆದು ಯುವ ಜನಾಂಗಕ್ಕೆ ಲಕ್ಷಾಂತರ ಉದ್ಯೋಗ ಸೃಷ್ಟಿಗೆ ಕಾರಣವಾಯಿತು. ಇದರ ಪರಿಣಾಮವಾಗಿ ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆದು ನಗರದ ವಿಸ್ತೀರ್ಣ ನಾಲ್ಕು ಪಟ್ಟು ಹೆಚ್ಚಾಗಿದೆ. ಬೆಂಗಳೂರು ನಗರ ಪಾಲಿಕೆ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಬದಲಾಗಿ ಬೆಂಗಳೂರಿನ ಸುತ್ತಮುತ್ತಲಿನ ಹಲವು ಬಡಾವಣೆಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಂಡಿದೆ. ಇದರಿಂದ ಬೆಂಗಳೂರಿನ ಆದಾಯ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ರಾಜ್ಯದ ಬಜೆಟ್ ಗಾತ್ರದಲ್ಲಿ ಅರ್ಧದಷ್ಟು ಭಾಗ ಬೆಂಗಳೂರು ನಗರದಿಂದ ಹರಿದು ಬರುವಂತಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.