ಬೆಂಗಳೂರು: ಹಿರಿಯ ರಾಜಕಾರಣಿ, ನೀರಾವರಿ ಹೋರಾಟಗಾರ ಜಿ. ಮಾದೇಗೌಡರ 95ನೇ ಹುಟ್ಟುಹಬ್ಬಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.
ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿ ಗ್ರಾಮೀಣ ಸೊಗಡನ್ನು ಮೈಗೂಡಿಸಿಕೊಂಡು ಕಳೆದ ಆರು ದಶಕಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡ ಹಿರಿಯ ಸೋದರನ ಸಮಾನರಾದ ಜಿ.ಮಾದೇಗೌಡ ಅವರಿಗೆ 95ನೇ ಹುಟ್ಟುಹಬ್ಬದ ಶುಭಕಾಮನೆಗಳು. ಅನಾರೋಗ್ಯದಿಂದ ಬಳಲುತ್ತಿರುವ ಮಾದೇಗೌಡರು ಬೇಗ ಗುಣಮುಖರಾಗಿ ನಾಡಿನ ಒಳಿತಿಗೆ ಮಾರ್ಗದರ್ಶನ ನೀಡಲಿ ಎಂದು ಎಸ್.ಎಂ.ಕೃಷ್ಣ ತಿಳಿಸಿದ್ದಾರೆ.
7 ಬಾರಿ ವಿಧಾನಸಭೆ ಮತ್ತು 2 ಬಾರಿ ಲೋಕಸಭೆ ಪ್ರವೇಶಿಸಿದ್ದ ಅಪರೂಪದ ರಾಜಕಾರಣಿಗೆ ಅರ್ಹತೆಗೆ ತಕ್ಕಂತೆ ಸಿಗಬೇಕಾದ ಸ್ಥಾನಮಾನಗಳು ಸಿಗದಿರುವ ಬಗ್ಗೆ ಎಸ್ಎಂಕೆ ಬೇಸರ ವ್ಯಕ್ತಪಡಿಸಿದ್ದಾರೆ. 1962 ರಲ್ಲಿ ನಾನು ಮತ್ತು ಅವರು ಒಟ್ಟಿಗೆ ಶಾಸನಸಭೆ ಪ್ರವೇಶಿಸಿ ಅಲ್ಲಿಂದ ಇಲ್ಲಿಯವರೆಗೆ ಹಲವು ಏಳುಬೀಳುಗಳ ನಡುವೆ ನಾಡಿನ ಒಳಿತಿಗೆ ಶ್ರಮಿಸಿದ್ದೇವೆ. ತಮ್ಮ ಛಲಬಿಡದ ಹೋರಾಟಗಳಿಂದ ಸದಾ ಸಮಾಜಮುಖಿಯಾಗಿ ಚಿಂತಿಸುವ ಗೌಡರ ಜೀವನ ಆದರ್ಶನೀಯ. ಮಳವಳ್ಳಿ ಮತ್ತು ಕಿರುಗಾವಲು ಕ್ಷೇತ್ರವನ್ನು ಏಳು ಬಾರಿ ಪ್ರತಿನಿಧಿಸಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದ ಮಾದೇಗೌಡರಿಗೆ ರಾಜಕೀಯ ಜೀವನದಲ್ಲಿ ಮತ್ತಷ್ಟು ಅವಕಾಶಗಳು ಲಭಿಸಬೇಕಾಗಿತ್ತು ಎಂಬುದು ನನ್ನ ಭಾವನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಾನು ಮತ್ತು ಅವರು ಒಂದೇ ತಾಲೂಕಿನವರಾಗಿದ್ದು ಹಲವು ಬಾರಿ ಒಟ್ಟಿಗೆ ಶಾಸನ ಸಭೆಯಲ್ಲಿ ಕಾರ್ಯನಿರ್ವಹಿಸಿದ್ದೇವೆ. ತಮ್ಮ ಗ್ರಾಮೀಣ ಶೈಲಿಯ ನಡವಳಿಕೆಯಿಂದ ಆಳುವ ವರ್ಗದ ಗಮನಸೆಳೆದು ತನ್ನ ಕ್ಷೇತ್ರಕ್ಕೆ ಸಲ್ಲಬೇಕಾದ ಕಾರ್ಯಗಳನ್ನು ಕಾರ್ಯಗತಗೊಳಿಸುತ್ತಿದ್ದರು. ಎಂದಿಗೂ ಯಾರ ಮುಂದೆಯೂ ತಲೆತಗ್ಗಿಸದೆ, ಆಳುವ ವರ್ಗದೊಂದಿಗೆ ಸದಾ ಸಂಘರ್ಷಮಯ ರಾಜಕಾರಣ ನಡೆಸಿದ್ದ ಗೌಡರು ನೋಡಲು ಒರಟರಂತೆ ಕಂಡರು ಸ್ನೇಹಜೀವಿ. ಅವರಲ್ಲಿ ಅಪಾರ ಸ್ನೇಹ ಭಾವವಿತ್ತು ಎಂದಿದ್ದಾರೆ.
ಇದನ್ನೂ ಓದಿ:ಕೆ.ಎಂ.ದೊಡ್ಡಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಡಾ.ಜಿ. ಮಾದೇಗೌಡ ಶಿಫ್ಟ್
ನನ್ನನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಕಾಣಬೇಕೆಂದು 1992 ರಲ್ಲಿ ದೆಹಲಿ ಮತ್ತು ಬೆಂಗಳೂರಿನಲ್ಲಿ ಅಹರ್ನಿಶಿ ದುಡಿದು ಹಲವು ಸಭೆಗಳ ಮುಂದಾಳತ್ವ ವಹಿಸಿದ್ದರು. ಆದರೆ ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಯಾವುದೋ ವಿಷಯಗಳಿಂದ ನಮ್ಮಿಬ್ಬರ ಮಧ್ಯೆ ಕಲಹ ಉಂಟಾಗಿದ್ದು ವಿಪರ್ಯಾಸ. 1982 ರಲ್ಲಿ ಕಾವೇರಿಯ ಮಧ್ಯಂತರ ತೀರ್ಪು ಬಂದಾಗ ಮಂಡ್ಯ ಜಿಲ್ಲೆ ಅಕ್ಷರಶಃ ರಣರಂಗವಾಗಿತ್ತು. ಅಂದು ಸಂಸತ್ ಸದಸ್ಯರಾಗಿದ್ದ ಗೌಡರು ಜನರ ಆಕ್ರೋಶವನ್ನು ಅರಿತು ಶಾಸನಸಭೆ ಅಧ್ಯಕ್ಷನಾಗಿದ್ದ ನನ್ನೊಂದಿಗೆ ಅಂದಿನ ಮುಖ್ಯಮಂತ್ರಿ ಬಂಗಾರಪ್ಪನವರ ಮೇಲೆ ಒತ್ತಡ ತಂದು ಯಾವುದೇ ಕಾರಣಕ್ಕೂ ಕಾವೇರಿ ಮಧ್ಯಂತರ ತೀರ್ಪನ್ನು ಪಾಲಿಸಲು ಸಾಧ್ಯವಿಲ್ಲವೆಂದು ಶಾಸನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲು ಮಾದೇಗೌಡರು ಕಾರಣೀಭೂತರಾದರು. ಅಂದೇ ಕಾವೇರಿ ಚಳುವಳಿಯ ಮುಂದಾಳತ್ವ ವಹಿಸಿಕೊಂಡು ಮಂಡ್ಯ ಜಿಲ್ಲಾ ರೈತರ ಹಿತರಕ್ಷಣಾ ಸಮಿತಿಯನ್ನು ಸ್ಥಾಪಿಸಿ ಹೋರಾಟಕ್ಕಿಳಿದರು.
ಇದನ್ನೂ ಓದಿ:ಮಾಜಿ ಸಂಸದ ಜಿ. ಮಾದೇಗೌಡರ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
1994-95 ರಲ್ಲಿ ತಾವು ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯರಾಗಿದ್ದರು. ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ ನೀಡಿದಾಗ ಅದನ್ನು ಧಿಕ್ಕರಿಸಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಜನರೊಂದಿಗೆ ಆಹೋರಾತ್ರಿ ಹೋರಾಟಕ್ಕಿಳಿದರು. ಅಂದಿನ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡರು ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಪ್ರತಿಭಟಿಸಿ ಇಡೀ ವಿರೋಧ ಪಕ್ಷವನ್ನು ಮಂಡ್ಯದಲ್ಲಿ ಜಮಾವಣೆಗೊಳಿಸಿ ಚಳುವಳಿಯನ್ನು ಉಗ್ರರೂಪಗೊಳಿಸಿದರು. ಆ ಚಳುವಳಿಯಲ್ಲಿ ನಾನು ಸೇರಿದಂತೆ ಹಾಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ರೈತ ಸಂಘದ ಪ್ರೊಫೆಸರ್ ನಂಜುಂಡಸ್ವಾಮಿ ಸೇರಿದಂತೆ ಹಲವು ಘಟಾನುಘಟಿಗಳು ಮಂಡ್ಯದ ಸಿಲ್ವರ್ ಜುಬಿಲಿ ಪಾರ್ಕ್ ಹಾಗೂ ರೈತ ಸಭಾಂಗಣದಲ್ಲಿ ಸರಣಿ ಪ್ರತಿಭಟನಾ ಸಭೆಗಳನ್ನು ಗೌಡರ ನೇತೃತ್ವದಲ್ಲಿ ನಡೆಸಿದ್ದು ಹಚ್ಚಹಸಿರಾಗಿದೆ ಎಂದು ಹಳೆ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ರಾಜಕೀಯದ ಜೊತೆಗೆ ಸಾಹಿತ್ಯದ ಕುರಿತು ಆಸಕ್ತಿ ಹೊಂದಿದ್ದ ಮಾದೇಗೌಡರು ಮಂಡ್ಯದಲ್ಲಿ 63ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಲು ಕಾರಣರಾದರು. ಅಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ನಾನು ಸಂಪೂರ್ಣ ಸಹಕಾರವನ್ನು ಗೌಡರಿಗೆ ನೀಡಿ, ಹೆಗಲು ನೀಡಿದ್ದೆ. ಮಂಡ್ಯ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿಯವರ ನೆನಪುಗಳನ್ನು ಉಳಿಸಲು ಗಾಂಧಿ ಭವನ ನಿರ್ಮಿಸಿ, ಗಾಂಧಿ ಸ್ಮಾರಕ ಟ್ರಸ್ಟ್ನ ಅಧ್ಯಕ್ಷರಾಗಿ ಗಾಂಧಿ ಗ್ರಾಮ ನಿರ್ಮಿಸಲು ಇಳಿವಯಸ್ಸಿನಲ್ಲೂ ಶ್ರಮಿಸಿದರು. ಇಷ್ಟೆಲ್ಲಾ ಜನ ಪರ ಬದ್ಧತೆಯನ್ನು ಹೊಂದಿರುವ ಮಾದೇಗೌಡರ ಸೇವೆ ಜನರಿಗೆ ಮತ್ತಷ್ಟು ಅಗತ್ಯವಿದೆ. ಭಗವಂತನ ದಯೆಯಿಂದ 95 ವಸಂತಗಳನ್ನು ಪೂರೈಸಿರುವ ಗೌಡರು, ಶೀಘ್ರ ಗುಣಮುಖರಾಗಿ ಮತ್ತೆ ನಮ್ಮೊಂದಿಗೆ ಬೆರೆಯುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಭಾವನಾತ್ಮಕವಾಗಿ ತಿಳಿಸಿದ್ದಾರೆ.