ಬೆಂಗಳೂರು: 14ನೇ ವಯಸ್ಸಿಗೂ ಮೊದಲೇ ಶಾಲೆ ತೊರೆಯುವ ಮಕ್ಕಳಿಗೆ ಆ ವಯಸ್ಸಿನಲ್ಲೇ ಕೌಶಲ್ಯ ತರಬೇತಿ ನೀಡುವ ಅಗತ್ಯವಿದೆ ಎಂದು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ, ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ.ರತ್ನಪ್ರಭಾ ಅಭಿಪ್ರಾಯಪಟ್ಟರು.
ಕೌಶಲ್ಯ ತರಬೇತಿ ಪ್ರಾಧಿಕಾರವು ವಿವಿಧ ವಲಯಗಳ ಕೌಶಲ್ಯ ಕೌನ್ಸಿಲ್‌ನೊಂದಿಗೆ "ಕೌಶಲ್ಯ ತರಬೇತಿ ಇರುವ ಅವಕಾಶಗಳ" ಕುರಿತು ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿ ಹಾಗೂ ಸಂವಾದದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಹಲವು ಕಾರಣದಿಂದ ಮಕ್ಕಳು 10ನೇ ತರಗತಿಗೆ ಓದು ನಿಲ್ಲಿಸುತ್ತಾರೆ. ಆ ಸಂದರ್ಭದಲ್ಲಿ ಮಕ್ಕಳ ವಯಸ್ಸು 14 ವರ್ಷ ಒಳಗಿರುವುದರಿಂದ ಕೌಶಲ್ಯ ತರಬೇತಿ ನೀಡಬೇಕೇ, ಬೇಡವೇ ಎಂಬುದು ಈಗಲೂ ಚರ್ಚಾ ವಿಷಯವೇ ಆಗಿದೆ.
ಆದರೆ, ಆ ಸಂದರ್ಭದಲ್ಲೇ ಅಂಥ ಮಕ್ಕಳನ್ನು ಗುರುತಿಸಿ ಕೌಶಲ್ಯ ತರಬೇತಿ ನೀಡಿದರೆ ಪರಿಣಾಮಕಾರಿಯಾಗಿ ಮಕ್ಕಳ ಭವಿಷ್ಯ ರೂಪಿಸಲು ನೆರವಾಗಲಿದೆ. 18 ವರ್ಷ ತುಂಬುವವರೆಗೂ ಅವರಿಗೆ ಪೂರ್ಣಾವಧಿ ಕೆಲಸಕ್ಕೆ ನೇಮಿಸುವ ಬದಲು, ಅಲ್ಪಾವಧಿ ಕೆಲಸ ಮಾಡಿಸುವುದರಿಂದ ಅವರ ವಯಸ್ಸಿನ ಮೇಲೆ ಯಾವುದೇ ಒತ್ತಡ ಬೀರಿದಂತಾಗುವುದಿಲ್ಲ. ಅಲ್ಲದೆ, ಅವರು ಪ್ರೌಢಾವಸ್ಥೆಗೆ ಬರುವುದರೊಳಗೆ ಅನುಭವದ ಜೊತೆಗೆ ಕೌಶಲ್ಯವನ್ನೂ ಮೈಗೂಡಿಸಿಕೊಳ್ಳಲಿದ್ದಾರೆ ಎಂದರು.