ಬೆಂಗಳೂರು:ಹತ್ಯೆಗೆ ಸ್ಕೆಚ್ ಮಾಡಿದ್ದ ಪ್ರಕರಣವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಜೊತೆಗೆ ಸಿಸಿಬಿ ಅಥವಾ ಸಿಐಡಿ ತನಿಖೆ ಕುರಿತು ಗುರುವಾರ ಸಿಎಂ ನಿರ್ಧರಿಸಲಿದ್ದಾರೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪ್ರವಾಸ ಮುಗಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಂತೆ ಯಲಹಂಕ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ತಮ್ಮ ಹತ್ಯೆಗೆ ಸ್ಕೆಚ್ ರೂಪಿಸಿದ್ದ ಪ್ರಕರಣದ ಕುರಿತು ಸಮಗ್ರ ಮಾಹಿತಿ ನೀಡಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಎಂ ಜೊತೆಯಲ್ಲೇ ಆರ್.ಟಿ ನಗರದ ಖಾಸಗಿ ನಿವಾಸಕ್ಕೆ ವಿಶ್ವನಾಥ್ ಆಗಮಿಸಿದರು. ಕೆಲಕಾಲ ಘಟನೆ ಕುರಿತು ಮಾಹಿತಿ ನೀಡಿದರು. ಜೊತೆಗೆ ವಿಡಿಯೋ, ಆಡಿಯೋದ ವಿವರ ನೀಡಿದರು.
ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ವಿಮಾನ ನಿಲ್ದಾಣದಿಂದಲೇ ಜೊತೆಗೆ ಬಂದೆ, ಬಹುತೇಕ ಎಲ್ಲಾ ಮಾಹಿತಿ ಸಿಎಂಗೆ ಇದೆ. ಇನ್ನೂ ಹೆಚ್ಚುವರಿ ಮಾಹಿತಿ ನೀಡಿದ್ದೇನೆ. ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಬರಲು ಹೇಳಿದ್ದಾರೆ. ನಂತರ ಸಿಸಿಬಿ ಅಥವಾ ಸಿಐಡಿ ತನಿಖೆಗೆ ಆದೇಶಿಸಬೇಕಾ ಅನ್ನೋದನ್ನ ನಿರ್ಧಾರ ಮಾಡಲಿದ್ದಾರೆ ಎಂದರು.
ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಸುಮ್ಮನೆ ಬಿಡಲ್ಲ ಅಂತಾ ಸಿಎಂ ಹೇಳಿದ್ದಾರೆ. ಸಿಎಂ ಸೂಚನೆಯಂತೆ ಮತ್ತೆ ಬೇರೆ ಕಡೆ ದೂರು ಕೊಡಬೇಕಾ ಅಂತಾ ತೀರ್ಮಾನ ಮಾಡುತ್ತೇನೆ. ಸದ್ಯ ಆರೋಪಿ ಗೋಪಾಲಕೃಷ್ಣ ವಿಡಿಯೋ ನಕಲಿ ಅಂತಾ ಹೇಳಿದ್ದಾರೆ. ಅದು ನಕಲಿ ಅಂದರೆ ತನಿಖೆಯಲ್ಲಿ ಸಾಬೀತಾಗಲಿ. ನಕಲಿ ಆಗಿದ್ದರೆ ಪಾಪ ಗೋಪಾಲಕೃಷ್ಣಗೆ ತೊಂದರೆ ಆಗಬಾರದು. ಗುರುವಾರ ಏನೇನ್ ಆಗುತ್ತೆ ಅಂತಾ ಕಾದು ನೋಡೋಣ ಎಂದು ವಿಶ್ವನಾಥ್ ತಿಳಿಸಿದರು.
(ಇದನ್ನೂ ಓದಿ: ನಾನು ಸಾವಿಗೆ ಹೆದರುವವನಲ್ಲ: ರಾಜಕೀಯ ಜಿದ್ದಾಜಿದ್ದಿಗೆ ಬರಲಿ.. S R ವಿಶ್ವನಾಥ್ ಪಂಥಾಹ್ವಾನ)