ಬೆಂಗಳೂರು:ವೃದ್ಧೆಯನ್ನು ಕೊಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದ ಆರು ಜನ ಆರೋಪಿಗಳನ್ನು ಎಚ್ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ಮುಖೇಶ್ ಕಡ್ಕಾ, ಕಮಲ್, ಕೇಶವ ಭೂಡ, ಕಡಕ್ ಸಿಂಗ್, ಗಜೇಂದ್ರ ಹಾಗೂ ಶಿಬು ಕಟಾಯತ್ ಬಂಧಿತರು. ಆಗಸ್ಟ್ 13ರಂದು ಎಚ್ಎಸ್ಆರ್ ಲೇಔಟ್ ಠಾಣಾ ವ್ಯಾಪ್ತಿಯ ಫುಡ್ ಡೇಸ್ ಸರ್ಕಲ್ ಸಮೀಪದ ಮನೆಯೊಂದರಲ್ಲಿ ಜಯಶ್ರೀ (80) ಎಂಬುವವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿತ್ತು.
ಕೊಲೆಯಾದ ಜಯಶ್ರೀ ವಾಸವಿದ್ದ ಏರಿಯಾದಲ್ಲೇ ಇರುವ ಮನೆಯೊಂದರ ಸೆಕ್ಯುರಿಟಿ ಗಾರ್ಡ್ ಆಗಿದ್ದ ಆರೋಪಿ ಕಡಕ್ ಸಿಂಗ್ ಆಕೆಯ ಮನೆಯಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದ. ಬಳಿಕ ಒಂಟಿಯಾಗಿದ್ದ ಜಯಶ್ರಿಗೆ ಸೆಕ್ಯುರಿಟಿ ಅಗತ್ಯವಿರುವುದನ್ನು ತಿಳಿದುಕೊಂಡು, ಆರೋಪಿ ನೇಪಾಳದಿಂದ ಕಮಲ್ ಹಾಗೂ ಮುಖೇಶ್ ಕಡ್ಕಾನನ್ನು ಕರೆಸಿಕೊಂಡಿದ್ದ.
ಆ.13ರಂದು ಸೆಕ್ಯುರಿಟಿ ಸಿಬ್ಬಂದಿ ಪರಿಚಯಿಸುವ ನೆಪದಲ್ಲಿ ಜಯಶ್ರಿ ಮನೆಗೆ ಆರೋಪಿಗಳು ಹೋಗಿದ್ದರು. ಆಗ ದರೋಡೆಗೆ ಯತ್ನಿಸಿದಾಗ ಜಯಶ್ರಿ ಪ್ರತಿರೋಧಿಸಿದ್ದರು. ಬಳಿಕ ಆಕೆಯ ಉಸಿರುಗಟ್ಟಿಸಿ ಹತ್ಯೆಗೈದಿದ್ದ ಆರೋಪಿಗಳು ಮನೆಯಲ್ಲಿದ್ದ ಎರಡೂವರೆ ಲಕ್ಷ ರೂ ದೋಚಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಎಚ್ಎಸ್ಆರ್ ಲೇಔಟ್ ಪೊಲೀಸರು ಐವರನ್ನು ಬೆಂಗಳೂರಿನ ವಿವಿಧೆಡೆ ಹಾಗೂ ಪ್ರಮುಖ ಆರೋಪಿ ಗಜೇಂದ್ರನನ್ನು ಕಾನ್ಪುರದಲ್ಲಿ ಬಂಧಿಸಿದ್ದಾರೆ.
ಇದನ್ನೂ ಓದಿ: ಕೆಲ ದಿನಗಳಿಂದ ನನ್ನನ್ನು ಯಾರೋ ಕೊಲೆ ಮಾಡ್ತಾರೆ ಅಂತಿದ್ದ ಒಂಟಿ ವೃದ್ಧೆ.. ಆತಂಕದ ಬೆನ್ನಲ್ಲೇ ಅಜ್ಜಿ ಮರ್ಡರ್