ಬೆಂಗಳೂರು: ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಹಿನ್ನೆಲೆ ಕಳೆದ ವರ್ಷವೇ ಜಾರಿಗೆ ಬಂದಿರುವ ಏಕ ಬಳಕೆ ಪ್ಲಾಸ್ಟಿಕ್ ನಿಷೇಧವನ್ನು ಇಂದಿನಿಂದಲೇ (ಜು.1) ಕಟ್ಟುನಿಟ್ಟಾಗಿ ಆಚರಣೆಗೆ ತರಲು ಬಿಬಿಎಂಪಿ ತೀರ್ಮಾನಿಸಿದೆ. ವಾರದ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಘನತ್ಯಾಜ್ಯ ವಿಭಾಗದ ಸಭೆ ನಡೆದಿದ್ದು, ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಒಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
10 ಮೈಕ್ರಾನ್ ಗಿಂತ ಕಡಿಮೆ ಗಾತ್ರದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಕಳೆದ ವರ್ಷ ಆದೇಶ ಹೊರಡಿಸಿತ್ತು. ರಾಜ್ಯದಲ್ಲಿ ಸಹ ಈ ಆದೇಶ ಜಾರಿಗೆ ಬಂದಿದ್ದು, ಕಟ್ಟುನಿಟ್ಟಾಗಿ ಆಚರಣೆಗೆ ಬಂದಿರಲಿಲ್ಲ. ಇದೀಗ ಜುಲೈ 1ರಿಂದಲೇ ಈ ಆದೇಶವನ್ನು ಬಿಬಿಎಂಪಿಯ ಎಲ್ಲಾ ಎಂಟು ವಲಯಗಳಲ್ಲಿಯೂ ಕಟ್ಟುನಿಟ್ಟಾಗಿ ಜಾರಿಗೆ ತರಲು ತೀರ್ಮಾನಿಸಲಾಗಿದೆ.
ನಿಯಮ ಮೀರುವವರ ವಿರುದ್ಧ ಕಾನೂನು ರೀತ್ಯಾ ದಂಡ ವಿಧಿಸುವುದು ಅಥವಾ ಶಿಕ್ಷೆಗೆ ಒಳಪಡಿಸುವ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಲಿದೆ. ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಿದರೆ ಅಥವಾ ಕಸ ರೂಪದಲ್ಲಿ ಹಾಕಿದರೆ ವ್ಯಕ್ತಿ ಮತ್ತು ಮನೆಗಳಿಗೆ 500 ರೂ ಮತ್ತು ಸಾಂಸ್ಥಿಕ ತ್ಯಾಜ್ಯ ಉತ್ಪಾದಕರಿಗೆ ರೂ 5,000 ದಂಡ ವಿಧಿಸಲಾಗುತ್ತದೆ.
ಭಾರತವು ಪ್ರತಿ ವರ್ಷ 3.5 ಮಿಲಿಯನ್ ಟನ್ನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಹೊರ ಹಾಕುತ್ತದೆ. ಇದು ಕಳೆದ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ. ಹೀಗಾಗಿ ಜುಲೈ 1 ರಿಂದ ಏಕ - ಬಳಕೆಯ ಪ್ಲಾಸ್ಟಿನ್ನು ನಿಷೇಧಿಸಲಾಗುವುದು ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಹೇಳಿದ್ದು, ಇವರ ಹೇಳಿಕೆಯ ಬೆನ್ನಲ್ಲೇ ರಾಜ್ಯದಲ್ಲಿಯೂ ಪ್ಲಾಸ್ಟಿಕ್ ನಿಷೇಧ ಚಿಂತನೆ ಮತ್ತೆ ತಲೆ ಎತ್ತಿದ್ದು ಬೆಂಗಳೂರು ನಗರದ ಮೂಲಕ ಆಚರಣೆಗೆ ಬರುತ್ತಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹೊರಡಿಸಿದ ಈ ಆದೇಶವು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (KSPCB) ಗಡಿ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲು ಹೆಚ್ಚಿನ ಬಲ ನೀಡಿದಂತಾಗಿದೆ. ನಿಷೇಧದ ಬೆನ್ನಲ್ಲೇ ಅವುಗಳ ಉತ್ಪಾದನೆ, ವಿತರಣೆ, ಆಮದು, ಮಾರಾಟ, ದಾಸ್ತಾನು ಮತ್ತು ಬಳಕೆಯನ್ನು ನಿರ್ಬಂಧಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಸುಮಾರು 88 ಸಾವಿರ ಪ್ಲಾಸ್ಟಿಕ್ ಉತ್ಪಾದಕ ಘಟಕಗಳು ದಿವಾಳಿಯಾಗಲಿವೆ. ಈ ಘಟಕಗಳ 10 ಲಕ್ಷದಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಖೀಲ ಭಾರತ ಪ್ಲಾಸ್ಟಿಕ್ ತಯಾರಕರ ಸಂಘ ಆತಂಕ ವ್ಯಕ್ತಪಡಿಸಿದೆ.