ಬೆಂಗಳೂರು: ಕೈಗಾರಿಕೋದ್ಯಮಿಗಳ ಹಾಗೂ ಕೈಗಾರಿಕಾ ಸಂಸ್ಥೆಗಳ ಪ್ರಮುಖ ಬೇಡಿಕೆಯಾಗಿದ್ದ ಸ್ಥಳೀಯ ಸಂಸ್ಥೆಗಳ ತೆರಿಗೆ ಸಂಗ್ರಹಣೆಯ ಕುರಿತು ರಾಜ್ಯ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದೆ.
ಖನಿಜ ಭವನದಲ್ಲಿ ಇಂದು ಗ್ರಾಮೀಣಾಭಿವೃದ್ದಿ, ನಗರಾಭಿವೃದ್ದಿ, ಕೈಗಾರಿಕಾ ಇಲಾಖೆ ಹಾಗೂ ಇನ್ನಿತರೆ ಪ್ರಮುಖ ಇಲಾಖೆಗಳ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಗರ ಪ್ರದೇಶಗಳಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಕೈಗಾರಿಕೆಗಳಿಗೆ ಏಕರೂಪದ ತೆರಿಗೆ ಸಂಗ್ರಹಣೆ ಮಾಡುವ ನಿಟ್ಟಿನಲ್ಲಿ ಹೊಸ ನೀತಿಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ನಗರಸಭೆ, ಪುರ ಸಭೆ, ಕಾರ್ಪೋರೇಷನ್, ಗ್ರಾಮಪಂಚಾಯಿತಿಗಳ ಮೂಲಕ ತೆರಿಗೆ ಸಂಗ್ರಹಕ್ಕೆ ಇರುವ ಕ್ರಮಗಳಲ್ಲಿ ಬಹಳಷ್ಟು ಗೊಂದಲಗಳಿದ್ದವು. ಇವುಗಳನ್ನು ಸರಿಪಡಿಸುವಂತೆ ಕೊರಿ ಕೈಗಾರಿಕೋದ್ಯಮಿಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ಮನವಿ ನೀಡಿದ್ದವು. ಈ ಮನವಿಯ ಹಿನ್ನಲೆ ಹಾಗೂ ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ದಿಗೆ ಬೇಕಾಗಿರುವ ಸವಲತ್ತುಗಳನ್ನು ನೀಡುವ ದೃಷ್ಟಿಯಿಂದ ರಾಜ್ಯಾದ್ಯಂತ ಏಕರೂಪದ ತೆರಿಗೆ ಸಂಗ್ರಹಣೆಗೆ ಅಗತ್ಯವಿರುವ ನೀತಿಯನ್ನು ರೂಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅನೇಕ ಕಡೆ ಭೂಮಿ ಹಸ್ತಾಂತರವಾಗದೇ ಕೈಗಾರಿಕೆಗಳಿಗೆ ತೆರಿಗೆ ಹಾಕುವುದು ಸರಿಯಲ್ಲ ಎನ್ನುವ ನಿರ್ಧಾರವನ್ನು ತಗೆದುಕೊಳ್ಳಲಾಗಿದೆ. ಈ ಬಗ್ಗೆ ಎಲ್ಲಾ ಇಲಾಖೆಯಗಳು ಸಹಮತ ವ್ಯಕ್ತಪಡಿಸಿದ್ದಾರೆ. ಕೆಲವು ಕಡೆ ಇನ್ನೂ ಅಧಿಕೃತವಾಗಿ ಹಸ್ತಾಂತರವಾಗದೇ ಇರುವ ಕೈಗಾರಿಕೆಗಳ ಮೇಲೆ ಹಾಕಿರುವ ತೆರಿಗೆ ಪ್ರಮಾಣ ಬಹಳ ಹೆಚ್ಚಾಗಿದೆ. ಇದರ ಪರೀಶೀಲನೆಯ ಬಗ್ಗೆ ಕೂಲಂಕುಷವಾದ ಚರ್ಚೆ ನಡೆದಿದ್ದು, ಸದ್ಯದಲ್ಲೇ ಸಚಿವ ಸಂಪುಟದ ಮುಂದೆ ನೂತನ ನೀತಿಯ ಪ್ರಸ್ತಾಪವನ್ನು ಇರಿಸಲಾಗುವುದು ಎಂದು ಹೇಳಿದರು.
ನೂತನ ಕೈಗಾರಿಕಾ ನೀತಿ :
ರಾಜ್ಯದ ಹೊಸ ಕೈಗಾರಿಕಾ ನೀತಿಯು ಅಂತಿಮ ಹಂತದಲ್ಲಿದೆ. ಈಗಾಗಲೇ ಹಲವಾರು ಬಾರಿ ಕೈಗಾರಿಕೋದ್ಯಮಿಗಳು ಹಾಗೂ ಕೈಗಾರಿಕಾ ಸಂಘ, ಸಂಸ್ಥೆಗಳ ಜೊತೆ ಕೂಲಂಕುಷವಾದ ಚರ್ಚೆಯಾಗಿದೆ. ಆದಷ್ಟು ಬೇಗ ಅಗತ್ಯವಿರುವ ಇಲಾಖೆಗಳ ಒಪ್ಪಿಗೆಯನ್ನು ಪಡೆದುಕೊಳ್ಳಲಾಗುವುದು. ನಂತರ ಸಚಿವ ಸಂಪುಟದ ಮುಂದೆ ಇದನ್ನು ತರಲಾಗುವುದು. ರಾಜ್ಯದ ಟೂ ಟಯರ್ ನಗರಗಳಲ್ಲಿ ಕೈಗಾರಿಕೆಗಳನ್ನು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ನಾನು ಸಚಿವನಾಗಿ ಹಮ್ಮಿಕೊಂಡಿದ್ದೇನೆ. ಮೊದಲ ಹಂತವಾಗಿ ಹುಬ್ಬಳ್ಳಿಯಲ್ಲಿ 'ಇನ್‌ವೆಸ್ಟ್ ಕರ್ನಾಟಕ ಹುಬ್ಬಳ್ಳಿ' ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಿದ್ದೇವೆ. ಫೆಬ್ರವರಿ ಎರಡನೇ ವಾರದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮುಂದಿನ ಹಂತದಲ್ಲಿ ಬೆಳಗಾವಿ, ಗುಲ್ಬರ್ಗಾ, ಮೈಸೂರು, ದಾವಣಗೆರೆ ಹಾಗೂ ಶಿವಮೊಗ್ಗದಲ್ಲಿ ಹೂಡಿಕೆದಾರರ ಸಮಾವೇಶವನ್ನು ನಡೆಸಲಾಗುವುದು ಎಂದು ಹೇಳಿದರು.