ಬೆಂಗಳೂರು:ಸದನದಲ್ಲಿ ಸಚಿವ ವಿ.ಸೋಮಣ್ಣ ಹಾಗೂ ಸಿದ್ದರಾಮಯ್ಯ ನಡುವೆ ಜಟಾಪಟಿ ನಡೆದ ಘಟನೆ ನಡೆಯಿತು.
ಮಧ್ಯಾಹ್ನ ಬಜೆಟ್ ಮೇಲಿನ ಚರ್ಚೆಗೂ ಮುನ್ನ ಮಾತನಾಡಿದ ಸಚಿವ ವಿ.ಸೋಮಣ್ಣ, ನಾವು ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ದೇವೇಗೌಡರು, ಶಾಂತವೇರಿ ಗೋಪಾಲಗೌಡ, ಜೆ.ಹೆಚ್.ಪಟೇಲ್ ಅವರ ಕೋಟ್ ಮಾಡ್ತೀವಿ. ನಾನು ಕೂಡ ಕೆಲವರ ಚರ್ಚೆಯನ್ನು ನೋಡಿಕೊಂಡಿದ್ದೆ. ಅಂತವರ ಪಂಕ್ತಿಯಲ್ಲಿ ನೀವು ಬರಬೇಕು ಎಂಬುದು ನನ್ನ ಅಭಿಪ್ರಾಯ. ನಿಮ್ಮ ಚಿಂತನೆಗಳು ಇಂಥವರ ಪಂಕ್ತಿ ಸೇರಬೇಕು ಎಂದು ಸಲಹೆ ನೀಡಿದರು.
ವಿ.ಸೋಮಣ್ಣರ ಸಲಹೆಗೆ ಸಿಟ್ಟಾದ ಸಿದ್ದರಾಮಯ್ಯ, ನಾನು ನನ್ನನ್ನು ಯಾರಿಗೂ ಹೋಲಿಕೆ ಮಾಡಲು ಆಗಲ್ಲ. ಸಿದ್ದರಾಮಯ್ಯ ಸಿದ್ದರಾಮಯ್ಯನೇ. ಮಹಾತ್ಮಾ ಗಾಂಧಿ, ಅಂಬೇಡ್ಕರ್ಗೆ ಹೋಲಿಕೆ ಮಾಡಲು ಆಗುತ್ತಾ? ಜೆಪಿ, ಲೋಹಿಯಾಗೆ ಕಂಪೇರ್ ಮಾಡಲು ಆಗುತ್ತಾ? ನೀವು ಹೇಳೋದು ಗೊತ್ತಾಯಿತು. ಅಂಥವರ ಮಟ್ಟಕ್ಕೆ ಬಂದಿಲ್ಲ. ಅವರ ಮಟ್ಟಕ್ಕೆ ಬರಬೇಕು ಎಂಬ ಅರ್ಥದಲ್ಲಿ ಹೇಳಿದ್ದೀರಿ. ಇವೆಲ್ಲವೂ ನನಗೆ ಅರ್ಥ ಆಗಲ್ವಾ?. ಸೋಮಣ್ಣ ಸರ್ಟಿಫಿಕೇಟ್ ಕೊಡುವ ಆಗತ್ಯ ಇಲ್ಲ, ನಿಮ್ಮಿಂದ ಸರ್ಟಿಫಿಕೇಟ್ ಬೇಡ ನನಗೆ. ನಾನು ಸಿದ್ದರಾಮಯ್ಯ, ನೀವೇನು ಹೇಳೋದು. ಕೂತ್ಕೋ ಎಂದು ಜೋರಾಗಿ ತಿಳಿಸಿದರು.
ನಾನು ಗೋಪಾಲಗೌಡ, ಅರಸ್ ಅಲ್ಲ, ಆ ಕಾಲ ಬೇರೆ ಈ ಕಾಲ ಬೇರೆ. ಇವತ್ತಿನ ಚುನಾವಣಾ ವ್ಯವಸ್ಥೆಗೆ ಅವತ್ತಿನ ವ್ಯವಸ್ಥೆಗೆ ಸಾಕಷ್ಟು ವ್ಯತ್ಯಾಸ ಇದೆ. ಆತ್ಮವಂಚನೆ ಮಾಡಿ ರಾಜಕೀಯ ಮಾಡಬಾರದು. ಸದನದಲ್ಲಿ ಹೇಗೆ ಮಾತನಾಡಬೇಕು ವರ್ತಿಸಬೇಕು ಎಂದು ಗೊತ್ತಿದೆ. ನನಗೆ ಸದನದಲ್ಲಿ ಹೇಗೆ ಮಾತನಾಡಬೇಕು ಎಂಬುದು ಗೊತ್ತಿದೆ. ನಾನು 13 ಬಾರಿ ಬಜೆಟ್ ಭಾಷಣ ಮಾಡಿದ್ದೇನೆ. ಇದು ಮೊದಲ ಬಾರಿಯಲ್ಲ ಸೋಮಣ್ಣ ಈ ರೀತಿ ಹೇಳುವುದು. ಚುನಾವಣೆಯನ್ನು ಪ್ರಾಮಾಣಿಕವಾಗಿ ಎದುರಿಸೋಕೆ ಆಗುತ್ತಾ? ಆತ್ಮವಂಚನೆ ಮಾಡ್ಕೋಬಾರದು ಎಂದು ಗುಡುಗಿದರು.
ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶಿಸಿ, ನೀವು ಹೇಳುವುದರಲ್ಲಿ ಸತ್ಯ ಇದೆ. ಚುನಾವಣೆ ಯಾವ ಮಟ್ಟದಲ್ಲಿ ಹೋಗಿದೆ ಎಂಬುದು ಶೋಭೆ ತರುವಂತಿಲ್ಲ. ಹಿಂದಿನ ನೆನಪುಗಳು ಮಾತ್ರ ಇದೆ. ಅವರು ಆ ಮಟ್ಟಕ್ಕೆ ಇದ್ದರು. ಅವುಗಳನ್ನು ನೆನಪಿಸಿಕೊಳ್ಳದೆ ಇದ್ದರೆ ಏನಾಗಬಹುದು?. ವ್ಯವಸ್ಥೆ ಪಾತಾಳಕ್ಕೆ ತಲುಪುವ ಮೊದಲು ಎಲ್ಲರೂ ಚಿಂತನೆ ಮಾಡಬೇಕಾಗುತ್ತದೆ. ಜಗತ್ತಿನ ಬದಲಾವಣೆ ಭ್ರಮೆ ಬೇಡ. ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡುವ ಪ್ರಯತ್ನ ಮಾಡಬೇಕು ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಬಜೆಟ್ vs ಬಿಜೆಪಿ ಬಜೆಟ್: ಸದನದಲ್ಲಿ ಲೆಕ್ಕ ಬಿಡಿಸಿ ಹೇಳಿದ ಸಿದ್ದರಾಮಯ್ಯ