ಬೆಂಗಳೂರು: ಭಾರತೀಯ ಆಡಳಿತ ಸೇವೆಯ (ಸಿಬ್ಬಂದಿ) ನಿಯಮ 1954ಕ್ಕೆ ತಿದ್ದುಪಡಿ ತರುವುದರ ಮೂಲಕ ರಾಜ್ಯಗಳ ಆಡಳಿತಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಸಾಧಿಸಲು ಹೊರಟಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ಈ ತಿದ್ದುಪಡಿಗೆ ರಾಜ್ಯ ಸರ್ಕಾರ ತನ್ನ ವಿರೋಧ ವ್ಯಕ್ತಪಡಿಸಬೇಕು. ಪ್ರತಿ ಪಕ್ಷಗಳ ಜೊತೆ ಚರ್ಚಿಸಿ ಕೇಂದ್ರದ ನಿಲುವಿಗೆ ತನ್ನ ವಿರೋಧ ತಿಳಿಸಬೇಕು. ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ‘ಭಾರತೀಯ ಆಡಳಿತ ಸೇವೆಯ (ಸಿಬ್ಬಂದಿ) ನಿಯಮ-6, 1954’ ಕ್ಕೆ ತಿದ್ದುಪಡಿ ತರುವ ಉದ್ದೇಶದಿಂದ ಇದೇ 12ರಂದು ರಾಜ್ಯಗಳಿಗೆ ಪತ್ರ ಬರೆದಿದೆ.
ಸದರಿ ಪತ್ರದಲ್ಲಿ 3 ಮುಖ್ಯ ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ. ರಾಜ್ಯಗಳು ತಮ್ಮ ಅಭಿಪ್ರಾಯವನ್ನು 25/1/2022 ರ ಒಳಗೆ ತಿಳಿಸಬೇಕೆಂದೂ ಸಹ ಸೂಚಿಸಲಾಗಿದೆ. ಉದ್ದೇಶಿತ ತಿದ್ದುಪಡಿ ಪ್ರಕಾರ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಬೇಕೆಂದಾಗ ಕೇಂದ್ರಕ್ಕೆ ಕರೆಸಿಕೊಳ್ಳುವ, ಬೇಡ ಎಂದಾಗ ರಾಜ್ಯಗಳಿಗೆ ವಾಪಸ್ ಕಳುಹಿಸುವ ಪ್ರಸ್ತಾಪ ಇದರಲ್ಲಿದೆ ಎಂದು ವಿವರಿಸಿದ್ದಾರೆ.
ಕೇಂದ್ರ ಸರ್ಕಾರವು ಐಎಎಸ್-ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜಿಸುವಂತೆ ಸೂಚಿಸಿದರೆ ರಾಜ್ಯ ಸರ್ಕಾರ ನಿರ್ದಿಷ್ಟ ಸಮಯದೊಳಗೆ ಈ ಕೆಲಸವನ್ನು ಅನುಷ್ಠಾನ ಮಾಡಬೇಕು. ಅದಕ್ಕೂ ಮೊದಲು ರಾಜ್ಯಗಳು ಕೇಂದ್ರ ಸೇವೆಗೆ ಅರ್ಹರಾದವರನ್ನು ಪಟ್ಟಿ ಸಿದ್ದಪಡಿಸಬೇಕು. ಕೇಂದ್ರ ಸರ್ಕಾರವು ಎಷ್ಟು ಮಂದಿ ಅಧಿಕಾರಿಗಳು ಬೇಕು ಎಂದು ತಿಳಿಸುತ್ತದೋ ಅಷ್ಟು ಜನರನ್ನು ಕೇಂದ್ರವು ಔಪಚಾರಿಕವಾಗಿ ರಾಜ್ಯಗಳನ್ನು ಸಂಪರ್ಕಿಸಿ ತನ್ನ ಸೇವೆಗೆ ನಿಯೋಜಿಸಿಕೊಳ್ಳಬಹುದು.
ರಾಜ್ಯ ಸರ್ಕಾರ ಕೇಂದ್ರದ ಸೂಚನೆಯಂತೆ ನಡೆದುಕೊಳ್ಳದಿದ್ದರೆ ಕೇಂದ್ರ ಬಯಸಿದ ಅಧಿಕಾರಿಯನ್ನು ಆ ನಿರ್ಧಿಷ್ಟ ದಿನಾಂಕದ ಬಳಿಕ ಏಕಮುಖವಾಗಿ ಕೇಂದ್ರದ ಸೇವೆಗೆ ನಿಯೋಜಿಸಿಕೊಳ್ಳಬಹುದು. ಸದ್ಯ ರಾಜ್ಯ ಸೇವೆಯಲ್ಲಿರುವ ಯಾವುದೇ ಐಎಎಸ್-ಐಪಿಎಸ್ ಅಧಿಕಾರಿಯನ್ನು ಕೇಂದ್ರ ಸರ್ಕಾರ ಕೇಂದ್ರದ ಸೇವೆಗೆ ಕರೆಸಿಕೊಳ್ಳಬೇಕಿದ್ದರೆ ಅದಕ್ಕೆ ರಾಜ್ಯಗಳು ಅನುಮತಿ ನೀಡಬೇಕಿತ್ತು. ರಾಜ್ಯಗಳ ಈ ಅಧಿಕಾರವನ್ನು ಮುಲಾಜಿಲ್ಲದೇ ಕಿತ್ತು ಹಾಕಲು ಒಕ್ಕೂಟ ಸರ್ಕಾರ ಮುಂದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ನಿರ್ಧಾರಕ್ಕೆ ತಲೆಬಾಗೋದು ಬೇಡ:ತಮಗೆ ಬೇಕಾದಂತೆ ಐಎಎಸ್-ಐಪಿಎಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಒಮ್ಮತ ಮೂಡದಿದ್ದರೆ, ರಾಜ್ಯಗಳಿಗೆ ಕೇಂದ್ರ ಸರ್ಕಾರದ ತೀರ್ಮಾನಗಳ ಬಗ್ಗೆ ತಕರಾರು ಇದ್ದರೂ ಕೂಡ ರಾಜ್ಯಗಳು ಕೇಂದ್ರದ ತೀರ್ಮಾನವನ್ನು ನಿರ್ದಿಷ್ಟ ಅವಧಿಯ ಒಳಗೆ ಬಾಯಿ ಮುಚ್ಚಿಕೊಂಡು ಒಪ್ಪಿಕೊಳ್ಳಬೇಕು. ಈ ಕುರಿತಂತೆ ಕೇಂದ್ರದ ತೀರ್ಮಾನಗಳೇ ಅಂತಿಮವಾಗಿರುತ್ತವೆ.
ನಿರ್ದಿಷ್ಟ ಸಂದರ್ಭದಲ್ಲಿ ನಿರ್ಧಿಷ್ಟ ಅಧಿಕಾರಿ/ಅಧಿಕಾರಿಗಳ ಸೇವೆ ಸಾರ್ವಜನಿಕ ಹಿತಾಸಕ್ತಿ ಕಾರಣಕ್ಕೆ ಕೇಂದ್ರ ಸೇವೆಗೆ ಅಗತ್ಯವಿದೆ ಎಂದು ಕೇಂದ್ರ ತಿಳಿಸಿದರೆ ರಾಜ್ಯಗಳು ನಿರ್ದಿಷ್ಟ ಅವಧಿಯ ಒಳಗೆ ಕೇಂದ್ರದ ಸೂಚನೆಯನ್ನು ಅನುಷ್ಠಾನಗೊಳಿಸಬೇಕು ಎಂದು ವಿವರಿಸಿದ್ದಾರೆ.