ಹೊಸಕೋಟೆ(ಬೆಂಗಳೂರು): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರದ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟು ಬೆಳೆಹಾನಿಯ ಬಗ್ಗೆ ರೈತರಿಂದ ಮಾಹಿತಿ ಪಡೆದರು.
ಬೆಳೆಹಾನಿ ಪ್ರದೇಶಗಳಿಗೆ ಭೇಟಿ ಕೊಟ್ಟ ಸಿದ್ದರಾಮಯ್ಯ ಹೊಸಕೋಟೆ ಮಾರ್ಗವಾಗಿ ಪ್ರವಾಸ ಕೈಗೊಂಡ ಅವರು, ಹೊಸಕೋಟೆ ತಾಲೂಕಿನ ತಾವರೆಕೆಗೆ ಭೇಟಿ ನೀಡಿ ಮಳೆಯಿಂದ ರಾಗಿ, ಹೂವು, ತರಕಾರಿ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದನ್ನು ಪರಿಶೀಲಿಸಿದರು. ಅವರಿಗೆ ಶಾಸಕ ಶರತ್ ಬಚ್ಚೇಗೌಡ ಸಾಥ್ ನೀಡಿದರು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷ ನಾಯಕ :ಈ ಸಂದರ್ಭದಲ್ಲಿ ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸದೆ ಇರುವ ಬಗ್ಗೆ ತಿಳಿದ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬೆಳೆ ನಷ್ಟದ ಬಗ್ಗೆ ಅಧ್ಯಯನ ನಡೆಸಲಾಗಿದೆಯೇ ಎಂದು ಸಿದ್ದರಾಮಯ್ಯ ಅಧಿಕಾರಿಗಳನ್ನು ಪ್ರಶ್ನಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು. ಆದರೆ, ರೈತರು ಸರ್ಕಾರದಿಂದ ಯಾವುದೇ ಸಮೀಕ್ಷೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ಸಿದ್ದರಾಮಯ್ಯ ಗರಂ :ಇದಕ್ಕೆ ಫುಲ್ ಗರಂ ಆದ ಸಿದ್ದರಾಮಯ್ಯ, ಕೂಡಲೇ ಬೆಳೆಹಾನಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎಂದು ತಾಕೀತು ಮಾಡಿದರು. ಗೊಂದಲಕಾರಿ ಮಾಹಿತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮಳೆ ಹಾನಿ ಪೀಡಿತ ಪ್ರದೇಶಕ್ಕೆ ಹೋದಾಗ ರೈತರು ತಮಗಾದ ನಷ್ಟದ ಬಗ್ಗೆ ವಿವರಣೆ ನೀಡಿದರು. ಕೋಲ್ಕತ್ತಾದಿಂದ ಹೂವಿನ ಗಿಡಗಳನ್ನು ತಂದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದೆವು. ಈ ಹೂವು ವಿದೇಶಗಳಿಗೆ ರಫ್ತಾಗುತ್ತದೆ. ಈ ಬಾರಿ ಮಳೆಯಿಂದಾಗಿ ಬೆಳೆದು ನಿಂತ ಗಿಡಗಳು ಕೊಳೆತು ಹೋಗಿದೆ. ಹೂವಿನ ಗಿಡ ಕೊಳೆತು ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
ಇದನ್ನೂ ಓದಿ:ಹೊಲದಲ್ಲಿಯೇ ಕೊಳೆತ Tomato.. ಕೈಗೆ ಬಂದ ತುತ್ತು ಬಾಯಿಗಿಲ್ಲ!
ಇದಕ್ಕೂ ಮೊದಲು ಹೊಸಕೋಟೆ ಟೋಲ್ನಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿ ಸಿದ್ದರಾಮಯ್ಯನವರಿಗೆ ಸ್ವಾಗತ ಕೋರಿ ಸನ್ಮಾನ ಮಾಡಿದರು.