ಬೆಂಗಳೂರು:ರಾಜ್ಯ ಸರ್ಕಾರ ಕೂಡಲೇ ಶಾಲಾ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂ ವಿತರಣೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಟ್ವೀಟ್ ಮಾಡುವ ಜತೆಗೆ ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿರುವ ಅವರು, ಶೂ, ಸಾಕ್ಸ್ ಬಗ್ಗೆ ಸಚಿವರ ಹೇಳಿಕೆ ವಿಚಾರ ಪ್ರಸ್ತಾಪಿಸಿ, ನಾವು ಬಡಮಕ್ಕಳಿಗೆ ಅನುಕೂಲವಾಗಲೆಂದು ಸಾಕ್ಸ್ , ಶೂ ಕೊಡುತ್ತಿದ್ದೆವು. ಆದರೆ ಇವರು ನಿಲ್ಲಿಸಲು ಹೊರಟರು. ನಾವು ಒತ್ತಾಯ ಮಾಡಿದ ಮೇಲೆ ಕೊಡುತ್ತೇವೆ ಎಂದರು. ಶಾಲೆಗಳು ಆರಂಭವಾಗಿವೆ. ಶೂ, ಸಮವಸ್ತ್ರ ಕೊಡಬೇಕಿತ್ತು. ಆದರೆ ಇನ್ನೂ ಯಾವುದನ್ನೂ ಕೊಟ್ಟಿಲ್ಲ. ತಕ್ಷಣ ವಿತರಣೆ ಕಾರ್ಯ ಆರಂಭವಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಮರನಾಥ ಮೇಘಸ್ಫೋಟ ವಿಚಾರವಾಗಿ ಮಾತನಾಡಿದ ಅವರು, ಅವಘಡದಲ್ಲಿ ಸಿಲುಕಿದವರನ್ನ ಸುರಕ್ಷಿತವಾಗಿ ಕರೆತರಬೇಕು ಎಂದರು. ರಾಜ್ಯದಲ್ಲಿ ಮಳೆಯಿಂದ ಹಾನಿ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಉಸ್ತುವಾರಿಗಳು ಜಿಲ್ಲೆಗೆ ಹೋಗುತ್ತಿಲ್ಲ. ಜನರ ಕಷ್ಟ ಸುಖಗಳನ್ನ ಕೇಳಬೇಕಲ್ಲ. ಇಲ್ಲಿ ಬರಿ ಮೀಟಿಂಗ್ ಮಾಡಿದ್ರೆ ಸಾಕಾ?, ಮುಖ್ಯಮಂತ್ರಿಗಳು ಭೇಟಿ ನೀಡಬೇಕು. ನರೇಂದ್ರ ಮೋದಿ ಪರಿಹಾರ ಕೊಟ್ಟಿದ್ದಾರೇನ್ರಿ?. ಸಾವಿರಾರು ಕೋಟಿ ಕೊಟ್ಟಿದ್ದೇವೆ ಅಂತಾರಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.