ಬೆಂಗಳೂರು:ಕೊರೊನಾ ಸಂಬಂಧಿತ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ಬಾಯಿ ಮುಚ್ಚಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ: ಸಿದ್ದರಾಮಯ್ಯ - ಕೋವಿಡ್ ಭ್ರಷ್ಟಾಚಾರದ ಕುರಿತು ಸಿದ್ದರಾಮಯ್ಯ ಹೇಳಿಕೆ
ಕೊರೊನಾ ಭ್ರಷ್ಟಾಚಾರ ಕುರಿತು ಧ್ವನಿ ಎತ್ತಿರುವ ನಮ್ಮ ಹೋರಾಟ ಹತ್ತಿಕ್ಕುವ ಯತ್ನ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರೊನಾ ಸಂಬಂಧಿತ ಭ್ರಷ್ಟಾಚಾರದ ಆರೋಪಕ್ಕೆ ದಾಖಲೆ ಸಹಿತ ಉತ್ತರಿಸಲಾಗದ ರಾಜ್ಯ ಬಿಜೆಪಿ ಸರ್ಕಾರ, ಎನ್.ಆರ್.ರಮೇಶ್ ಅವರಿಂದ ಸುಳ್ಳು ಆರೋಪಗಳನ್ನು ಮಾಡಿಸುತ್ತಿದೆ. ಈ ವ್ಯಕ್ತಿ ಮಾಡಿರುವ ಎಲ್ಲ ಆರೋಪಗಳನ್ನು ಲೋಕಾಯುಕ್ತ ಮತ್ತು ಎಸಿಬಿ ತನಿಖೆ ನಡೆಸಿ ತಿರಸ್ಕರಿಸಿದೆ. ಈ ರೀತಿ ನಮ್ಮ ಬಾಯಿ ಮುಚ್ಚಿಸಲು ಸಾಧ್ಯ ಇಲ್ಲ ಎಂದಿದ್ದಾರೆ.
ನಿರಂತರವಾಗಿ ಕಾಂಗ್ರೆಸ್ ಪಕ್ಷ, ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಾ ಬಂದಿದೆ. ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಪಕ್ಷ ತಮ್ಮ ಹೋರಾಟ ಹತ್ತಿಕ್ಕುವ ಯತ್ನ ಮಾಡುತ್ತಿದೆ ಎಂಬ ಹೊಸ ಆರೋಪವನ್ನು ಇದೀಗ ಸಿದ್ದರಾಮಯ್ಯ ಮಾಡಿದ್ದಾರೆ.