ಬೆಂಗಳೂರು: ವಿವಿಧ ಸಮುದಾಯಗಳ ನಾಯಕರನ್ನು ಓಲೈಸುವ ಕಾರ್ಯಕ್ಕೆ ಮುಂದಾಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಹಿಂದುಳಿದ ವರ್ಗದ ನಾಯಕರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯನ್ನು ತಮ್ಮದೇ ನಾಯಕತ್ವದಲ್ಲಿ ಕೊಂಡೊಯ್ಯಲು ಪ್ರಯತ್ನ ನಡೆಸಿರುವ ಸಿದ್ದರಾಮಯ್ಯ, ಈಗಾಗಲೇ ಅಲ್ಪಸಂಖ್ಯಾತ ಸಮುದಾಯವನ್ನು ದೊಡ್ಡಮಟ್ಟದಲ್ಲಿ ತಮ್ಮ ವಿಶ್ವಾಸಕ್ಕೆ ಪಡೆಯುವಲ್ಲಿ ಸಫಲರಾಗಿದ್ದಾರೆ.
ಅಹಿಂದ ವರ್ಗ ಸದಾ ಇವರೊಂದಿಗೆ ಇದೆ. ಇದೀಗ ಹಿಂದುಳಿದ ವರ್ಗವನ್ನು ಸಹ ತಮ್ಮ ವಿಶ್ವಾಸಕ್ಕೆ ಪಡೆಯುವ ಪ್ರಯತ್ನಕ್ಕೆ ಸಿದ್ದರಾಮಯ್ಯ ಮುಂದಾಗಿದ್ದಾರೆ. ತಾವು ಮುಖ್ಯಮಂತ್ರಿಗಳಾಗಿ 2013 ರಿಂದ 18ರವರೆಗೆ ಕಾರ್ಯನಿರ್ವಹಿಸಿದ ಸಂದರ್ಭ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ವಿವಿಧ ಸಮುದಾಯಗಳ ಅಭಿವೃದ್ಧಿಗೆ ಹಮ್ಮಿಕೊಂಡ ಯೋಜನೆಗಳ ಕುರಿತು ಗಮನ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರದ ಸಾರಥ್ಯ ವಹಿಸುವ ಹಾಗೂ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಗಾದಿಗೇರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಅವರು, ಬಹಿರಂಗವಾಗಿ ಹೇಳಿಕೆ ನೀಡಲು ಸಾಧ್ಯವಾಗದೆ ಪ್ರತ್ಯೇಕವಾಗಿ ವಿವಿಧ ಸಮುದಾಯದ ಮುಖಂಡರನ್ನು ತಮ್ಮ ವ್ಯಾಪ್ತಿಗೆ ಸೆಳೆದುಕೊಳ್ಳುವ ಯತ್ನಕ್ಕೆ ಮುಂದಾಗಿದ್ದಾರೆ.
ಇಂದು ಬೆಂಗಳೂರಿನ ಶಿವಾನಂದ ವೃತ್ತ ಸಮೀಪವಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಹಿಂದುಳಿದ ವರ್ಗಗಳ ಸಮುದಾಯದ ಮುಖಂಡರು ಭೇಟಿನೀಡಿ ಸಮಾಲೋಚನೆ ನಡೆಸಿದರು. ಹಿಂದಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಆಧ್ಯಕ್ಷ, ಹಿರಿಯ ಪತ್ರಕರ್ತ ದ್ವಾರಕಾನಾಥ್, ವಿಧಾನ ಪರಿಷತ್ ಸದಸ್ಯ ರಮೇಶ್, ಮಾಜಿ ಸದಸ್ಯರಾದ ವೇಣುಗೋಪಾಲ, ಮುಖ್ಯಮಂತ್ರಿ ಚಂದ್ರು, ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹಾಗೂ ಕೆ.ಎಲ್. ಮಂಜುನಾಥ್ ಹಾಜರಿದ್ದರು.