ಕರ್ನಾಟಕ

karnataka

ETV Bharat / city

ಸದನದಲ್ಲಿ ಮಾತನಾಡುವ ನನ್ನ ಹಕ್ಕನ್ನು ಮೊಟಕುಗೊಳಿಸಲಾಗಿದೆ: ಸಿದ್ದರಾಮಯ್ಯ ಬೇಸರ - ಹಕ್ಕುಚ್ಯುತಿ ನಿಲುವಳಿ ಮಂಡಿಸಲು ನೋಟಿಸ್

ಹಕ್ಕುಚ್ಯುತಿ ನಿಲುವಳಿ ಮಂಡಿಸಲು ನೋಟಿಸ್ ನೀಡಿ ಅದರ ಮೇಲೆ‌ ಚರ್ಚೆಗೆ ಅವಕಾಶ ಕೋರಿದ್ದರೂ ಮಾತನಾಡಲು ಅವಕಾಶ ನೀಡದೆ ಸದನದಲ್ಲಿ ಮಾತನಾಡುವ ನನ್ನ ಹಕ್ಕನ್ನು ಮೊಟಕುಗೊಳಿಸಲಾಗಿದೆ. ನನ್ನ 40 ವರ್ಷದ ರಾಜಕಾರಣದಲ್ಲಿ ಇಂತಹ ವ್ಯವಸ್ಥೆಯನ್ನು ನೋಡಿಲ್ಲವೆಂದು ಆಡಳಿತ ಪಕ್ಷದ ಕಾರ್ಯವೈಖರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

Siddaramaiah
ಸಿದ್ದರಾಮಯ್ಯ

By

Published : Mar 11, 2020, 4:50 PM IST

ಬೆಂಗಳೂರು: ಹಕ್ಕುಚ್ಯುತಿ ನಿಲುವಳಿ ಮಂಡಿಸಲು ನೋಟಿಸ್ ನೀಡಿ ಅದರ ಮೇಲೆ‌ ಚರ್ಚೆಗೆ ಅವಕಾಶ ಕೋರಿದ್ದರೂ ಮಾತನಾಡಲು ಅವಕಾಶ ನೀಡದೆ ಸದನದಲ್ಲಿ ಮಾತನಾಡುವ ನನ್ನ ಹಕ್ಕನ್ನು ಮೊಟಕುಗೊಳಿಸಲಾಗಿದೆ. ನನ್ನ 40 ವರ್ಷದ ರಾಜಕಾರಣದಲ್ಲಿ ಇಂತಹ ವ್ಯವಸ್ಥೆಯನ್ನು ನಾನು ನೋಡಿಲ್ಲವೆಂದು ಆಡಳಿತ ಪಕ್ಷದ ಕಾರ್ಯವೈಖರಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸದನದ ಚರ್ಚೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಪಕ್ಷಾಂತರ ಮಾಡುವವರ ಮೇಲೆ ಸಂವಿಧಾನದ 10 ನೇ ಷಡ್ಯೂಲ್ ಅಡಿ ಕ್ರಮ ಕೈಗೊಳ್ಳಲು ಸ್ಪೀಕರ್​ಗೆ ಅಧಿಕಾರ ಇದೆ. ಅದರಂತೆಯೇ ಅಂದಿನ‌ ಸ್ಪೀಕರ್ ರಮೇಶ್ ಕುಮಾರ್ 17 ಶಾಸಕರನ್ನು ಪಕ್ಷಾಂತರ ಮಾಡಿದ ಸಾಕ್ಷಿ‌ ಆಧಾರದ ಅನ್ವಯ ಅನರ್ಹಗೊಳಿಸಿದ್ದರು. ಸುಪ್ರೀಂ ಕೋರ್ಟ್ ಕೂಡ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿದೆ. ಅದನ್ನು ಪ್ರಸ್ತಾಪ ಮಾಡಲು ಹೋಗಿ ಈ ಪೀಠದಿಂದ‌ ನಮಗೆ ಅನ್ಯಾಯವಾಗಿದೆ ಎಂದು ರಮೇಶ್ ಕುಮಾರ್ ಅಲಂಕರಿಸಿದ್ದ ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ಅಗೌರವ ತಂದಿದ್ದಾರೆ. ಹಾಗಾಗಿ ರಮೇಶ್ ಕುಮಾರ್ ಹಾಗೂ ಸದನದ ಹಕ್ಕುಚ್ಯುತಿಯಾಗಿದೆ. ನಾ‌ನು ನಿನ್ನೆಯೇ ನೋಟಿಸ್ ಕೊಟ್ಟಿದ್ದೇನೆ, ಆಳುವ ಪಕ್ಷದ ಸದಸ್ಯರು ಮತ್ತು ಸಚಿವರು ನನ್ನ ಮಾತನಾಡುವ ಹಕ್ಕನ್ನು ಮೊಟಕುಗೊಳಿಸುತ್ತಿದ್ದಾರೆ. ಸದನದಲ್ಲಿ ಮಾತನಾಡಲು ಬಿಡುತ್ತಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಹಕ್ಕುಚ್ಯುತಿ ಬಗ್ಗೆ ಸದನದಲ್ಲಿ ಚರ್ಚೆಗೆ ಅವರು ತಯಾರಾಗಿರಬೇಕಿತ್ತು. ನಾನು ಮಾತನಾಡಿದ ನಂತರ ಅವರಿಗೂ ಮಾತನಾಡಲು ಅವಕಾಶ ಕೊಡಿ, ನಿಯಮಾವಳಿ ಪ್ರಕಾರ ಕೊಡಿ ಎಂದೆ. ನಾನು ಮೊದಲೇ ಅವಕಾಶ ಕೇಳಿದ್ದೆ ಎದ್ದು ನಿಂತಿದ್ದರೂ‌ ಸಚಿವ ಜಗದೀಶ್ ಶೆಟ್ಟರ್​ಗೆ ಮಾತನಾಡಲು ಅವಕಾಶ ಕೊಡುತ್ತಾರೆ. ಪ್ರತಿಪಕ್ಷ ನಾಯಕ‌ ಎದ್ದು‌ ನಿಂತಾಗ ನನಗೆ ಅವಕಾಶ ಕೊಡಬೇಕು. ನಾನು‌ ಸಲ್ಲಿಸಿದ್ದ ಮೋಷನ್ ಕೂಡ ಬಾಕಿ‌ ಇತ್ತು, ಹಾಗಾಗಿ ನನಗೆ ಅವಕಾಶ ಕೊಡಬೇಕಿತ್ತು. ಹಾಗಂತ ನಾ‌ನು ಸ್ಪೀಕರ್ ಮೇಲೆ ಆರೋಪ ಮಾಡಲ್ಲ, ಇವರು ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಅವರಿಗೆ ಸದನ ನಡೆಸಲು ಇಷ್ಟವಿಲ್ಲ, ನನ್ನ 40 ವರ್ಷದ ರಾಜಕಾರಣದಲ್ಲಿ ಇಂತಹ ಸ್ಥಿತಿ‌ ನೋಡಿಲ್ಲ. ಇಡೀ ಸಚಿವ ಸಂಪುಟವೇ ಎದ್ದುನಿಂತು ಕೂಗಾಡುತ್ತದೆ. ಬಹುಮತ ಇದೆ ಅಂತಾ ಸ್ವೇಚ್ಛಾಚಾರದಿಂದ ನಡೆದುಕೊಳ್ಳಲು‌ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸದನ ನಿಯಮಾವಳಿ ಪ್ರಕಾರ ನಡೆಯಬೇಕು, ಸದಸ್ಯರು ಹಾಗೂ ಸ್ಪೀಕರ್ ಪೀಠದ ಮೇಲೆ ಮನಬಂದಂತೆ ಮಾತನಾಡುವುದಲ್ಲ. ಹಾಗೆ ಮಾತನಾಡಿದರೆ ಕ್ರಮ ತಗೆದುಕೊಳ್ಳಬೇಕು.‌ ಆ ಅಧಿಕಾರ ಸ್ಪೀಕರ್​ಗೆ ಇದೆ, ಅದರಂತೆ ಕ್ರಮಕ್ಕೆ ನಾವು ಒತ್ತಾಯಿಸಿದ್ದೇವೆ. ಅವರು ಬೇಕಾದರೂ ದೂರು ಕೊಡಲಿ, ‌ಚರ್ಚೆಯಾಗಲಿ, ಆದರೆ ಅದಕ್ಕೆ ಅವರು ಸಿದ್ಧರಿಲ್ಲ. ಸದನ ಕರೆದವರು ಅವರು, ಬಜೆಟ್ ಮಂಡಿಸಿದವರು ಅವರು, ನಾವು ಸಹಕಾರಕ್ಕೆ ಸಿದ್ಧ ಇದ್ದೇವೆ, ಸರ್ಕಾರ ಸದನಕ್ಕೆ‌ ಉತ್ತರದಾಯಿ, ಜನರಿಗೆ ಉತ್ತರದಾಯಿ ಆದರೆ ಅದರಿಂದ ಪಲಾಯನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಟೀಕಿಸಿದರು.

ಇವರಿಗೆ ಜನ ಅಧಿಕಾರ‌ ಕೊಟ್ಟಿಲ್ಲ, ಅನೈತಿಕವಾಗಿ ಬಂದು ಕುಳಿತಿದ್ದಾರೆ. ಸಿಎಂ ಯಡಿಯೂರಪ್ಪ ಸದನದಲ್ಲಿ ಯತ್ನಾಳ್ ಬಗ್ಗೆ ಮಾತನಾಡಿದಾಗಲೂ ಮೌನವಾಗಿದ್ದರು, ಈಗಲೂ ಮೌನವಾಗಿದ್ದಾರೆ. ಎಲ್ಲೋ ಒಂದು ಕಡೆ ಪರೋಕ್ಷವಾಗಿ ಇದನ್ನು ಬೆಂಬಲಿಸುತ್ತಿದ್ದಾರೆ. ಅಸಹಾಯಕತೆಯೂ ಇರಬಹುದು ಎಂದು ಕುಟುಕಿದರು. ರಾಜ್ಯದಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ, ಕೊರೊನಾ ತುರ್ತು ಪರಿಸ್ಥಿತಿ ಇದೆ, ಕೆಟ್ಟ ರೋಗ, ಅದರ ಬಗ್ಗೆ ಚರ್ಚೆ ಇಲ್ಲ. ಪ್ರತಿದಿನ‌ ಸದನಕ್ಕೆ‌ ಕೊರೊನಾ ಮಾಹಿತಿ ತಿಳಿಸಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ ಆ ಕೆಲಸ ಆಗುತ್ತಿಲ್ಲ, ರಾಜ್ಯದ ಸಮಸ್ಯೆಗಳ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ‌ ಇಲ್ಲ, ಪ್ರವಾಹ ಬಂದಿದೆ, ಅಭಿವೃದ್ಧಿ ನಿಂತಿದೆ, ಕೇಂದ್ರ ಅನುದಾನ ಕೊಟ್ಟಿಲ್ಲ. ಅದರ ಬಗ್ಗೆಯೂ ಚರ್ಚೆ ಇಲ್ಲ. ಇವೆಲ್ಲದರಿಂದ ತಪ್ಪಿಸಿಕೊಳ್ಳಲು ಈ ನಾಟಕ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಗುಡುಗಿದರು.

ABOUT THE AUTHOR

...view details