ಕರ್ನಾಟಕ

karnataka

ETV Bharat / city

ಕೆಲ ರೋಗಗ್ರಸ್ತ ಮನಸ್ಸುಗಳಿಗೆ ಸಂವಿಧಾನಕ್ಕಿಂತ ಮನುಸ್ಮೃತಿಯೇ ಹೆಚ್ಚು ಪ್ರಿಯ : ಸಿದ್ದರಾಮಯ್ಯ

ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಈಗಲೂ ಹಿಂದೂ ಧರ್ಮದೊಳಗಿರುವ ಕೆಲ ರೋಗಗ್ರಸ್ತ ಮನಸ್ಸುಗಳಿಗೆ ಸಂವಿಧಾನಕ್ಕಿಂತ ಮನುಸ್ಮೃತಿ ಹೆಚ್ಚು ಪ್ರಿಯವೆನಿಸಿದೆ. ಅದು ಸಾರಿರುವ ಜಾತಿ ವ್ಯವಸ್ಥೆಯ ಬುಡ ಭದ್ರಪಡಿಸುವ ಕೆಲಸವನ್ನು ಈ ವರ್ಗ ಗುಟ್ಟಾಗಿ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ..

siddaramaiah statements about Constitution Day
ಸಂವಿಧಾನ ದಿನ ಕುರಿತು ಸಿದ್ದರಾಮಯ್ಯ ಹೇಳಿಕೆ

By

Published : Nov 26, 2021, 7:19 PM IST

ಬೆಂಗಳೂರು: ಏಕರೂಪದ ರಾಷ್ಟ್ರೀಯತೆ ನಮ್ಮ ಸಂವಿಧಾನದ ಭದ್ರ ಬುನಾದಿಗೆ ಧಕ್ಕೆಯುಂಟು ಮಾಡಲಿದೆ‌ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಸಂವಿಧಾನ ದಿನದ ಪ್ರಯುಕ್ತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂದು ರಾಷ್ಟ್ರೀಯತೆ ಎಂಬ ಪದ ಹಲವು ವಾದ-ವಿವಾದಗಳು, ಚರ್ಚೆಗಳನ್ನು ಹುಟ್ಟು ಹಾಕಿದೆ.

ಒಂದು ಸಮುದಾಯ ಅಥವಾ ಒಂದು ಧರ್ಮದ ನೀತಿಗಳೇ ರಾಷ್ಟ್ರೀಯತೆ ಎಂಬಂತೆ ಬಿಂಬಿಸಲಾಗುತ್ತಿದೆ. ಕೋಮುವಾದ, ಜಾತಿ ತಾರತಮ್ಯ, ಮೂಢ ನಂಬಿಕೆ, ಕಂದಾಚಾರ ಮೊದಲಾದ ಸಾಮಾಜಿಕ ಪಿಡುಗುಗಳೆಲ್ಲ ಮತ್ತೆ ತಲೆ ಎತ್ತಲು ಪ್ರಯತ್ನಿಸುತ್ತಿರುವ ಈ ಹೊತ್ತಿನಲ್ಲಿ ಅದರ ವಿರುದ್ಧದ ಹೋರಾಟಕ್ಕೆ ನಮಗಿರುವ ಅಸ್ತ್ರಗಳೆಂದರೆ ಬುದ್ಧ, ಬಸವಣ್ಣ, ಅಂಬೇಡ್ಕರ್ ಮೊದಲಾದವರ ತತ್ವ-ಸಿದ್ಧಾಂತಗಳು.

ಇದರ ಮೂಲಕವಷ್ಟೇ ಸಂವಿಧಾನದ ಮೂಲ ಆಶಯವಾದ ಸಮಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ನಾವು ಸಂವಿಧಾನವನ್ನು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ‌ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಂಬೇಡ್ಕರ್ ಅವರು ತಾವೇ ರಚಿಸಿರುವ ಸಂವಿಧಾನದ ಬುನಾದಿ ಮೇಲೆ ಭವಿಷ್ಯದ ಭಾರತವನ್ನು ನಿರ್ಮಾಣ ಮಾಡಲು ಬಯಸಿದ್ದರು.

ಆದರೆ, ಸಂವಿಧಾನವನ್ನು ಮನಪೂರ್ವಕವಾಗಿ ಒಪ್ಪದೇ ಇದ್ದ ಹಿಂದೂ ಧರ್ಮದೊಳಗಿದ್ದ ಒಂದು ವರ್ಗ ಮನುಸ್ಮೃತಿ ಆಧಾರದಲ್ಲಿ ಸಮಾಜವನ್ನು ನಿರ್ಮಾಣ ಮಾಡಲು ಹೊರಟಿರುವುದು ಅಂಬೇಡ್ಕರ್​ ಅವರಿಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿಯೇ ಅವರು ಹಿಂದೂ ಧರ್ಮವನ್ನು ತ್ಯಜಿಸುವ ನಿರ್ಧಾರ ಕೈಗೊಂಡಿದ್ದರು. ಪರಿಸ್ಥಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ.

ಈಗಲೂ ಹಿಂದೂ ಧರ್ಮದೊಳಗಿರುವ ರೋಗಗ್ರಸ್ತ ಮನಸ್ಸುಗಳಿಗೆ ಸಂವಿಧಾನಕ್ಕಿಂತ ಮನುಸ್ಮೃತಿ ಹೆಚ್ಚು ಪ್ರಿಯವೆನಿಸಿದೆ. ಅದು ಸಾರಿರುವ ಜಾತಿ ವ್ಯವಸ್ಥೆಯ ಬುಡ ಭದ್ರಪಡಿಸುವ ಕೆಲಸವನ್ನು ಈ ವರ್ಗ ಗುಟ್ಟಾಗಿ ಮಾಡುತ್ತಿದೆ ಎಂದಿದ್ದಾರೆ. ಸಂವಿಧಾನವನ್ನು ಬದಲಾವಣೆ ಮಾಡಲಿಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಕೇಂದ್ರ ಸಚಿವರೊಬ್ಬರು ಬಹಿರಂಗವಾಗಿ ಹೇಳಿಕೆ ನೀಡುತ್ತಾರೆ.

ಈ ದೇಶದ ಪ್ರಧಾನಿಯಾಗಲಿ, ಅವರ ಪಕ್ಷವಾಗಲಿ ಬಾಯಿಮಾತಿಗಾದರೂ ಸಚಿವರ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸುವುದಿಲ್ಲ. ಇದರ ಅರ್ಥ ತಮ್ಮ ಬಾಯಿಯಿಂದ ಹೇಳಬೇಕೆಂದಿರುವುದನ್ನು ಅವರು ಈ ಸಚಿವರ ಬಾಯಿಯಿಂದ ಹೇಳಿಸಿದ್ದಾರೆ. ಇದನ್ನು ನಾವು ತಿಳಿದುಕೊಳ್ಳಬೇಕು. ಇಂತಹವರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ, ಅದು ಸಾರುವ ಆಶಯಗಳಲ್ಲಿ ನಂಬಿಕೆ ಇಲ್ಲ.

ಸಾಮಾಜಿಕ ನ್ಯಾಯದ ಸಿದ್ಧಾಂತ, ಅಸ್ಪೃಶ್ಯತೆಯ ನಿರ್ಮೂಲನೆ ಯಾವುದೂ ಅವರಿಗೆ ಬೇಕಾಗಿಲ್ಲ. ಪಟ್ಟಭದ್ರ ಹಿತಾಸಕ್ತಿಯನ್ನು ಹೊಂದಿರುವ ಯಥಾಸ್ಥಿತಿವಾದಿಗಳು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಶೋಷಿತರು, ಅವಕಾಶ ವಂಚಿತರು ದನಿ ಎತ್ತುವಂತೆ ಮಾಡಿದವರು ಅಂಬೇಡ್ಕರ್‌.. ಸಿಎಂ ಬೊಮ್ಮಾಯಿ

ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಸಂವಿಧಾನ ನಮಗೆ ನೀಡಿರುವ ಮತ್ತೊಂದು ಮಹತ್ವದ ಕೊಡುಗೆ. ಮಾನವ ಬೆಳವಣಿಗೆಯ ಇತಿಹಾಸದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯುನ್ನತ ಘಟ್ಟ. ನಮ್ಮ ಸಂವಿಧಾನ ಇದನ್ನು ಯಾವುದೇ ಧರ್ಮ, ಜಾತಿ, ಲಿಂಗ ತಾರತಮ್ಯವಿಲ್ಲದೇ ಕಲ್ಪಿಸಿದೆ. ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈಗ ನಮ್ಮ ಮುಂದಿರುವ ಸವಾಲು ಎಂದರು.

ABOUT THE AUTHOR

...view details