ದೇವನಹಳ್ಳಿ :ಈ ಹಿಂದೆ ಯಾರು ಮೀಸಲಾತಿ ವಿರೋಧಿಸುತ್ತಿದ್ದರೋ, ಈಗ ಅವರು ಅದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಇದಕ್ಕೆ ಕಾರಣ ಸಮಾಜದ ಎಲ್ಲಾ ಜಾತಿಗಳು ಮೀಸಲಾತಿ ಅಡಿಯಲ್ಲಿ ಬಂದಿರುವುದು. ಮೀಸಲಾತಿ ಈಗ 60%ರಷ್ಟು ಇದ್ದು, ಮೇಲ್ಜಾತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೂ 10% ಮೀಸಲಾತಿ ಕಲ್ಪಿಸಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಇಂದು ಆಯೋಜಿಸಿದ್ದ ಗಾಣಿಗ ಸಮುದಾಯದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅವಕಾಶದಿಂದ ವಂಚಿತರಾದ ಜಾತಿಗಳು ಜಾತಿ ಸಮ್ಮೇಳನಗಳನ್ನು ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ಅದು ಜಾತೀಯತೆಯಾಗಲ್ಲ, ಸಮಾಜದ ಸಂಪತ್ತನ್ನು ಅನುಭವಿಸುವ ಸಮುದಾಯಗಳು ಜಾತಿ ಸಮ್ಮೇಳನಗಳನ್ನು ನಡೆಸಿದರೆ ಮಾತ್ರ ಅದು ಜಾತೀಯತೆ ಆಗುತ್ತದೆ ಎಂದು ಲೋಹಿಯಾ ಹೇಳಿದ್ದಾರೆ.
ನನ್ನ ತಂದೆ, ತಾಯಿ ಶಿಕ್ಷಣದಿಂದ ವಂಚಿತರಾಗಿದ್ದರು. ನಾನು ಕಾನೂನು ಪದವಿ ಗಳಿಸಿದ್ದಕ್ಕೆ ಇಂದು ಸಮಾಜದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಸಾಧ್ಯವಾಗಿದೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. 'ಶಿಕ್ಷಣ, ಸಂಘಟನೆ ಮತ್ತು ಹೋರಾಟ' ಎಂಬ ಮೂರು ಸೂತ್ರಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತ ವರ್ಗದ ಜನರಿಗೆ ನೀಡಿದ್ದಾರೆ. ಒಂದು ವೇಳೆ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗದೆ ಹೋಗಿದ್ದರೆ ನಮಗೆ ಇಂಥಾ ಶ್ರೇಷ್ಠ ಸಂವಿಧಾನ ಸಿಗುತ್ತಿರಲಿಲ್ಲ.