ಕರ್ನಾಟಕ

karnataka

ETV Bharat / city

RSS - Taliban ನಡುವೆ ಇರುವ ವ್ಯತ್ಯಾಸವನ್ನ ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು: ಗೃಹ ಸಚಿವ

ಆರ್​ಎಸ್​​ಎಸ್​​ ಒಳ್ಳೆಯದನ್ನು ಮಾಡು ಎಂದು ಹೇಳುತ್ತದೆ. ಬದುಕು ಹಾಗೂ ದೇಶದ ಹಿತ ಬಂದಾಗ ಬದುಕನ್ನು ಬಲಿಕೊಟ್ಟು ದೇಶ ರಕ್ಷಣೆ ಮಾಡು ಎಂದು ಹೇಳುವ ಸಂಘಟನೆ ಇದು ಎಂದು ಸಿದ್ದರಾಮಯ್ಯಗೆ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.

ಮಾಧ್ಯಮಗಳ ಜೊತೆ ಗೃಹ ಸಚಿವ ಆರಗ ಜ್ಞಾನೇಂದ್ರ
ಮಾಧ್ಯಮಗಳ ಜೊತೆ ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Sep 28, 2021, 1:10 PM IST

ಮೈಸೂರು: ಆರ್​ಎಸ್​​ಎಸ್​​ನದ್ದು ತಾಲಿಬಾನ್ ರೀತಿಯ ಸಂಸ್ಕೃತಿ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ತಾಲಿಬಾನಿಗಳಿಗೂ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ ಇರುವ ವ್ಯತ್ಯಾಸವನ್ನು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಗೃಹ ಸಚಿವ ಆರಗ ಜ್ಞಾನೇಂದ್ರ

ಹುಚ್ಚಗಣಿ ದೇವಾಲಯ ಧ್ವಂಸ ಪ್ರಕರಣ ಖಂಡಿಸಿ ಇಂದು ಕೋಟೆ ಆಂಜನೇಯ ದೇವಸ್ಥಾನದ ಎದುರು ಹಿಂದೂ‌ ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ಮೈಸೂರಿನಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ರದ್ದುಗೊಳಿಸಬೇಕೆಂದು ಆರಗ ಜ್ಞಾನೇಂದ್ರ ಸ್ಥಳಕ್ಕೆ ಬಂದಿದ್ದರು. ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ್ ಅವರನ್ನು ಭೇಟಿಯಾಗಿ ಪಾದಯಾತ್ರೆ ರದ್ದುಗೊಳಿಸುವಂತೆ ಮನವಿ ಮಾಡಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಅವರು ಹೊಟ್ಟೆಕಿಚ್ಚು ಪಡುವಷ್ಟು ಒಳ್ಳೆಯ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಅನೇಕ ಸಂಗತಿಗಳನ್ನು ಹೇಳಬೇಕಾಗುತ್ತದೆ.
ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಮೊದಲು ತಾಲಿಬಾನ್​​ಗಳು ಹಾಗೂ ಆರ್​ಎಸ್​​ಎಸ್​​ಗೂ ಇರುವ ವ್ಯತ್ಯಾಸವನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದರು.

ಇದನ್ನೂ ಓದಿ: RSS ಕೈಗೊಂಬೆಯಂತೆ ಸಿಎಂ, ಸರ್ಕಾರದ ತಾಳದಂತೆ ಸ್ಪೀಕರ್ ಕೆಲಸ: ಸಿದ್ದು ವಾಗ್ದಾಳಿ

ವಿರೋಧ ಪಕ್ಷದವರು ಜನರೆದುರು ಒಂದು ಸಂಘಟನೆಯನ್ನು ಅಪಹಾಸ್ಯ ಮಾಡಬೇಕೆಂದು ಹೀಗೆಲ್ಲಾ ಹೇಳಿಕೆ ಕೊಡುತ್ತಾರೆ. ಜನರು ದಡ್ಡರಲ್ಲ. ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ದೇಶದಲ್ಲಿ ಏನು ಕೆಲಸ ಮಾಡುತ್ತಿದೆ, ಎಷ್ಟು ಜನರಿಗೆ ಒಳಿತು ಮಾಡಿದೆ ಎಂಬುದು ಜನರಿಗೆ ಗೊತ್ತು.

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ಗೃಹ ಸಚಿವರೂ ಕೂಡ ಆರ್​ಎಸ್​​ಎಸ್​​ನಿಂದ ಬಂದವರು. ಆರ್​ಎಸ್​​ಎಸ್​​ ಒಳ್ಳೆಯದನ್ನು ಮಾಡು ಎಂದು ಹೇಳುತ್ತದೆ. ಬದುಕು ಹಾಗೂ ದೇಶದ ಹಿತ ಬಂದಾಗ ಬದುಕನ್ನು ಬಲಿಕೊಟ್ಟು ದೇಶ ರಕ್ಷಣೆ ಮಾಡು ಎಂದು ಹೇಳುವ ಸಂಘಟನೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಇದರ ಜೊತೆಗೆ ಬಿಜೆಪಿ ಮನುಷ್ಯತ್ವ ಇಲ್ಲದವರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಯಾರಿಗೆ ಮನುಷ್ಯತ್ವ ಇಲ್ಲ, ಯಾರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತು.‌ ಬಿಜೆಪಿ ಕೈಯಲ್ಲಿ ರಾಷ್ಟ್ರದ ಸರ್ಕಾರ ಸಿಕ್ಕಮೇಲೆ ಬಾಂಬ್ ಹಾಕುವವರ ಸಂಖ್ಯೆ ಕಡಿಮೆಯಾಗಿದೆ. ಸಿದ್ದರಾಮಯ್ಯ ಸಂಘಟನೆಯನ್ನು (ಅಹಿಂದ್​) ಬ್ಯಾಟರಿ ಹಾಕಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.

ಅಧಿಕಾರಿ ತೀರ್ಪು ಸರಿಯಾಗಿ ಓದಬೇಕಿತ್ತು

ಹುಚ್ಚಗಣಿ ಶಕ್ತಿ ದೇವತೆ ದೇವಾಲಯ ಒಡೆದು ಹಾಕುವ ಮೊದಲು ಅಧಿಕಾರಿಗಳು ಕೋರ್ಟ್ ಆದೇಶವನ್ನು ಸರಿಯಾದ ರೀತಿ ಓದಬೇಕಿತ್ತು. ಅಧಿಕಾರಿಗಳು ಸರ್ಕಾರದ ನಿರ್ದೇಶನ ಪಡೆಯಬೇಕಿತ್ತು. ಅದು ಆಗಿಲ್ಲ, ಘಟನೆ ನಡೆದಿದೆ. ಇದಕ್ಕೆ ಪೂರಕವಾದ ಕಾಯ್ದೆಯನ್ನು ತಂದಿದ್ದೇವೆ. ಅಧಿಕಾರಿಗಳಿಗೂ ಸ್ಪಷ್ಟ ಚಿತ್ರಣ ಸಿಗುವ ರೀತಿ ಮಾಡಿದ್ದೇವೆ. ಪವಿತ್ರ ಸ್ಥಳಗಳ ರಕ್ಷಣೆ ನಮ್ಮ ಹೊಣೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ABOUT THE AUTHOR

...view details