ಕರ್ನಾಟಕ

karnataka

ETV Bharat / city

ಸದನದಲ್ಲಿ ಚರ್ಚೆಗೆ ಅವಕಾಶ ನೀಡದ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಕಿಡಿಕಾರಿದ ಸಿದ್ದರಾಮಯ್ಯ - ಮಾಧ್ಯಮ ವಿರೋಧಿ ಸರ್ಕಾರ ಎಂಬ ಶೀರ್ಷಿಕೆಯಡಿ ಸರಣಿ ಟ್ವೀಟ್

ವಿಧಾನಸಭೆಯಲ್ಲಿ ತಮಗೆ ಚರ್ಚೆಗೆ ಅವಕಾಶ ಸಿಗದಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ
Siddaramaiah

By

Published : Mar 3, 2020, 5:59 AM IST

ಬೆಂಗಳೂರು: 363ರ ನಿಯಮದ ಪ್ರಕಾರ ವಿಧಾನಸಭೆಯಲ್ಲಿ ತಮಗೆ ಚರ್ಚೆಗೆ ಅವಕಾಶ ಸಿಗದಿರುವುದಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಬೇಸರ ಹೊರಹಾಕಿರುವ ಅವರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರನ್ನು ಅವಮಾನಿಸಿರುವ ವಿಷಯದ ಕುರಿತು ಚರ್ಚಿಸಲು ಸಭಾಧ್ಯಕ್ಷರಿಗೆ ತಮ್ಮ‌ ವಿವೇಚನಾಧಿಕಾರ ಬಳಸಿ ಅವಕಾಶ ನೀಡುವಂತೆ ಮನವಿ ಮಾಡಿದ್ದೆವು. ನಮ್ಮ ಆರೋಪವಿರುವುದು ಸರ್ಕಾರದ ವಿರುದ್ಧ ಅಲ್ಲ, ವಿಧಾನಸಭಾ ಕಲಾಪದ ನಿಯಮಾವಳಿ 363ರ ಪ್ರಕಾರ ನಮಗೆ ಚರ್ಚೆಗೆ ಅವಕಾಶ ನೀಡಬೇಕಿತ್ತು ಎಂದಿದ್ದಾರೆ.

ಇಂದೂ ಕೂಡ ಬಸವನಗೌಡ ಪಾಟೀಲ್ ಯತ್ನಾಳ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಂಚನೆಯೂ ಸೇರಿದಂತೆ ತಮ್ಮ ಮೇಲೆ 20 ಕ್ಕೂ ಅಧಿಕ ಪ್ರಕರಣಗಳಿವೆ ಎಂದು ಚುನಾವಣಾ ಆಯೋಗದ ಮುಂದೆಯೇ ಒಪ್ಪಿಕೊಂಡಿರುವವರಿಗೆ, ಒಬ್ಬ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡುವಾಗ ತಮ್ಮ ಯೋಗ್ಯತೆ ತಿಳಿಯಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮ ವಿರೋಧಿ ಸರ್ಕಾರ ಎಂಬ ಶೀರ್ಷಿಕೆಯಡಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಭಾರತೀಯ ಜನತಾ ಪಕ್ಷ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿ ಎನ್ನುವುದಕ್ಕೆ ವಿಧಾನಮಂಡಲದ ಕಲಾಪದ ಪ್ರತ್ಯಕ್ಷ ವರದಿ‌ ಮಾಡದಂತೆ‌ ಟಿವಿ ಚಾನೆಲ್‌ಗಳ ಮೇಲೆ ಹೇರಿರುವ ನಿರ್ಬಂಧವೇ ಸಾಕ್ಷಿ. ವಿಧಾನಮಂಡಲದ ಕಲಾಪದ ವರದಿಗೆ ಸರ್ಕಾರಿ ಚಾನೆಲ್ ಚಂದನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರದ ಋಣದಲ್ಲಿರುವ ಆ ಚಾನೆಲ್ ವಿರೋಧ ಪಕ್ಷಗಳ ಸದಸ್ಯರ ಮುಖಗಳನ್ನು ಮರೆಮಾಚಿ ಕೇವಲ ಸಭಾಧ್ಯಕ್ಷರ ಮುಖ ತೋರಿಸಿ ಭಜನೆ ಮಾಡುತ್ತಿರುವುದು ವಿಷಾದನೀಯ ಎಂದಿದ್ದಾರೆ.

ಸದನದೊಳಗೆ ತಮ್ಮ ಸದಸ್ಯರು ನೀಲಿಚಿತ್ರ ನೋಡುತ್ತಾರೆಂಬ ಭಯ ಬಿಜೆಪಿಗೆ ಇದ್ದರೆ ಅವರಿಗೆ ಬುದ್ದಿ ಹೇಳಬೇಕೇ ಹೊರತು, ಅದಕ್ಕಾಗಿ ಟಿವಿ ಚಾನೆಲ್‌ನವರ ಕ್ಯಾಮೆರಾ ನಿರ್ಬಂಧಿಸುವುದಲ್ಲ, ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಟಿವಿ ಚಾನೆಲ್‌ಗಳ ಕ್ಯಾಮೆರಾಗಳನ್ನು ನಿರ್ಬಂಧಿಸುವಂತೆ ಕೆಲವರು ಒತ್ತಾಯಿಸಿದ್ದರು. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕೆ ನಾನು ಒಪ್ಪಿರಲಿಲ್ಲ. ಟಿವಿ ಚಾನೆಲ್‌ಗಳ ಕ್ಯಾಮೆರಾಗಳಿಗೆ ಏಕಪಕ್ಷೀಯವಾಗಿ ನಿರ್ಬಂಧ ಹೇರಿರುವ ಸಭಾಧ್ಯಕ್ಷರ ಮಾಧ್ಯಮ ವಿರೋಧಿ ನಡವಳಿಕೆಯ ವಿರುದ್ಧ ಮಾಧ್ಯಮ ಮಿತ್ರರು ನಡೆಸುವ ಹೋರಾಟಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದು ವಿವರಿಸಿದ್ದಾರೆ.

ABOUT THE AUTHOR

...view details