ಬೆಂಗಳೂರು: 2021-22 ಕ್ಕೆ ರಾಜ್ಯ ಬಜೆಟ್ ಮಂಡಿಸಲು ಅಧಿವೇಶನ ಕರೆದಿದ್ದಾರೆ. ಈ ರಾಜ್ಯ ಸರ್ಕಾರಕ್ಕೆ ಆಯವ್ಯಯ ಮಂಡಿಸಲು ಯಾವುದೇ ನೈತಿಕತೆ ಇಲ್ಲ. ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಯಡಿಯೂರಪ್ಪ ಮತ್ತು ಸಚಿವ ನಿರಾಣಿ ಹೌಸಿಂಗ್ ಬೋರ್ಡ್ ಪ್ರಕರಣವೊಂದರ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಪ್ರಕರಣದ ತನಿಖೆಗೆ ಹೈಕೋರ್ಟ್ ಆದೇಶಿಸಿತ್ತು. ಇದಕ್ಕೆ ಜ.27 ರಂದು ಸುಪ್ರೀಂ ಕೋರ್ಟ್ನಲ್ಲಿ ಹೈಕೋರ್ಟ್ ಆದೇಶಕ್ಕೆ ಸ್ಟೇ ಕೇಳಿ ಅಪೀಲು ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಇದನ್ನು ನಿರಾಕರಿಸಿತು. ಈ ವೇಳೆ ಪೊಲೀಸರು ಇವರನ್ನು ಬಂಧಿಸಬಹುದಿತ್ತು. ಆದರೆ, ಸಿಎಂ ಅವರನ್ನು ಬಂಧಿಸಲು ಸಾಧ್ಯವೇ ಎಂದು ಸುಪ್ರೀಂ ನ್ಯಾಯಮೂರ್ತಿ ಹೇಳಿದರು. ಹೀಗಾಗಿ ಸದನದಲ್ಲಿ ಸಿಎಂ ಬೇಲ್ ಮೇಲಿದ್ದಾರೆ. ಅದಕ್ಕೆ ನನ್ನ ಪ್ರಕಾರ ಸಿಎಂ ಬಿಎಸ್ವೈ ಮತ್ತು ಸಚಿವ ನಿರಾಣಿ ಇಬ್ಬರೂ ಸದ್ಯ ನಿರೀಕ್ಷಣಾ ಜಾಮೀನಿನ ಮೇಲಿದ್ದಾರೆ ಎಂದರು.