ಕರ್ನಾಟಕ

karnataka

ETV Bharat / city

ಮೇಕೆದಾಟು ಪಾದಯಾತ್ರೆ: ಬೆನ್ನು ನೋವು ಹಿನ್ನೆಲೆ ಮತ್ತೆ ಮನೆಗೆ ಮರಳಿದ ಸಿದ್ದರಾಮಯ್ಯ - ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ಮುಂದುವರಿಕೆ

ನಾಲ್ಕನೇ ದಿನದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರಿಗೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿಗೆ ವಾಪಸಾಗಿದ್ದಾರೆ.

siddaramaiah leave padayatra and returned to home due to health issue
ವಿಪಕ್ಷ ನಾಯಕ ಸಿದ್ದರಾಮಯ್ಯ

By

Published : Jan 12, 2022, 7:48 PM IST

ಬೆಂಗಳೂರು: ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎರಡನೇ ಬಾರಿ ಅನಾರೋಗ್ಯದ ಕಾರಣ ನೀಡಿ ನಗರಕ್ಕೆ ಹಿಂದಿರುಗಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ

ಭಾನುವಾರ ಆರಂಭವಾದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಮೊದಲ ದಿನವೇ ಮಧ್ಯಾಹ್ನದ ಹೊತ್ತಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಬೆಂಗಳೂರಿಗೆ ವಾಪಸಾಗಿದ್ದರು. ಮಂಗಳವಾರ (ಮೂರನೇ ದಿನ)ದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಬುಧವಾರ ಮಧ್ಯಾಹ್ನದವರೆಗೂ ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್​ ಅವರೊಂದಿಗೆ ಹೆಜ್ಜೆ ಹಾಕಿದ್ದರು. ಆದರೆ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆ, ಇಂದು ಮಧ್ಯಾಹ್ನದ ನಂತರ ಆರಂಭವಾದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳದೇ ನಗರಕ್ಕೆ ವಾಪಸಾಗಿದ್ದಾರೆ.

ಆರೋಗ್ಯ ಸಮಸ್ಯೆ-ಬೆಂಗಳೂರಿಗೆ ವಾಪಸ್​:

2013ರಲ್ಲಿ ಪಕ್ಷ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಬಳ್ಳಾರಿಗೆ ಕೈಗೊಂಡಿದ್ದ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರಿಗೆ ಇದೀಗ ವಯೋಸಹಜ ಸಮಸ್ಯೆಗಳು ಹಾಗೂ ಕೋವಿಡ್ ನಂತರ ಕಾಡುತ್ತಿರುವ ಹಲವು ತೊಂದರೆಗಳಿಂದಾಗಿ ಶಾರೀರಿಕವಾಗಿ ದಣಿದಿದ್ದಾರೆ. ಮೊದಲಿನಂತೆ ಉತ್ಸಾಹದಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ.

ಮೇಲಿಂದ ಮೇಲೆ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದು, ಅವರಿಗೆ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ನಾಲ್ಕನೇ ದಿನದ ಪಾದಯಾತ್ರೆ ಮುಕ್ತಾಯಕ್ಕೂ ಮುನ್ನವೇ ಎರಡನೇ ಬಾರಿ ಬೆಂಗಳೂರಿಗೆ ಹಿಂದುರಿಗಿದ್ದಾರೆ.

ಹೈಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ:

ಬೆಂಗಳೂರಿನ ಶಿವಾನಂದ ವೃತ್ತ ಸಮೀಪವಿರುವ ತಮ್ಮ ಸರ್ಕಾರಿ ನಿವಾಸಕ್ಕೆ ಆಗಮಿಸಿದ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದರು. ಹೈಕೋರ್ಟ್​ನಲ್ಲಿ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಹಾಗೂ ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಆಗಿರುವ ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಸಂಬಂಧ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಜ.14ರಂದು ಹೈಕೋರ್ಟ್ ನೀಡುವ ತೀರ್ಪನ್ನು ಕಾಂಗ್ರೆಸ್ ಪಕ್ಷ ಗೌರವಿಸಲಿದೆ ಎಂದರು.

ಹೈಕೋರ್ಟ್ ನೀಡುವ ಸೂಚನೆ ಹಾಗೂ ಮಾರ್ಗದರ್ಶನವನ್ನು ನಾವು ಪಾಲಿಸುತ್ತೇವೆ. ನಾವು ಸರ್ಕಾರಕ್ಕೆ ಎಲ್ಲಾ ಮಾಹಿತಿಯನ್ನು ನೀಡಿಯೇ ಪಾದಯಾತ್ರೆ ಆರಂಭಿಸಿದ್ದೇವೆ. ಇಲ್ಲಿ ಸರ್ಕಾರದ ಅನುಮತಿ ಪಡೆಯುವ ಅಗತ್ಯ ಇಲ್ಲ. ನಾಳೆಯೂ ಯಾವುದೇ ಆತಂಕವಿಲ್ಲದೇ ಪಾದಯಾತ್ರೆ ಮುಂದುವರೆಯಲಿದೆ. ನಾಳೆಯ ಪಾದಯಾತ್ರೆಯಲ್ಲಿ ತಾವು ಪಾಲ್ಗೊಳ್ಳುತ್ತಿರುವುದಾಗಿ ಎಂದು ತಿಳಿಸಿದರು.

ನಮಗೆ ಹೈಕೋರ್ಟ್ ಯಾವುದೇ ಪ್ರಶ್ನೆ ಕೇಳಿಲ್ಲ:

ಪಾದಯಾತ್ರೆ ಸಂದರ್ಭ ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಆಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಹೈಕೋರ್ಟ್ ಯಾವುದೇ ಪ್ರಶ್ನೆ ಕೇಳಿಲ್ಲ. ಅವರು ಪ್ರಶ್ನೆ ಕೇಳಿರುವುದು ಸರ್ಕಾರಕ್ಕೆ. ಸರ್ಕಾರ ಸೂಕ್ತ ಉತ್ತರ ನೀಡಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ:ನಾಳೆ, ನಾಡಿದ್ದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾದಯಾತ್ರೆ: ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

ಪಾದಯಾತ್ರೆಯಲ್ಲಿ ಪಾಲ್ಗೊಂಡು ಸುಸ್ತಾಗಿರುವ ಸಿದ್ದರಾಮಯ್ಯ ವಿಶ್ರಾಂತಿ ತೆಗೆದುಕೊಳ್ಳಲಿದ್ದು, ನಾಳೆಯ ಆರೋಗ್ಯ ಸ್ಥಿತಿ ಅವಲೋಕಿಸಿ ಪಾದಯಾತ್ರೆಗೆ ತೆರಳಬೇಕೋ, ಬೇಡವೋ ಎಂಬ ನಿರ್ಧಾರ ಕೈಗೊಳ್ಳಲಿದ್ದಾರೆ.

ABOUT THE AUTHOR

...view details