ಬೆಂಗಳೂರು: ಕಣ್ಣಿಗೆ ಸೋಂಕು ತಗುಲಿದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆರಂಭದಲ್ಲಿ ಉತ್ತರಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಕೈಗೊಳ್ಳೋದಕ್ಕೆ ಸಾಧ್ಯವಾಗಿರಲಿಲ್ಲ. ಮೊನ್ನೆ ಮೊದಲ ಹಂತದಲ್ಲಿ ಬಾಗಲಕೋಟೆ ಜಿಲ್ಲೆ ಮತ್ತು ತಮ್ಮ ತವರು ಕ್ಷೇತ್ರ ಬಾದಾಮಿಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರು. ಸಂತ್ರಸ್ತರ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಮಾಡಿದ್ದರು. ಈಗ ಅಗಸ್ಟ್27ರಿಂದ ಉತ್ತರಕರ್ನಾಟಕದಲ್ಲಿ 2ನೇ ಹಂತದ ಪ್ರವಾಸ ಕೈಗೊಳ್ಳಲಿದ್ದಾರೆ.
ಅಗಸ್ಟ್ 27 ರಿಂದ 2ನೇ ಹಂತದ ಪ್ರವಾಸ ಕೈಗೊಳ್ತಾರೆ ಮಾಜಿ ಸಿಎಂ ಸಿದ್ದರಾಮಯ್ಯ.. ಅಗಸ್ಟ್19ರಿಂದ 21ರವರೆಗೆಬಾದಾಮಿ ವಿಧಾನಸಭೆ ಕ್ಷೇತ್ರದ ಹಲವೆಡೆ ಪ್ರವಾಸ ಕೈಗೊಂಡು ಮಳೆ ಹಾಗೂ ನೆರೆಯಿಂದ ತೊಂದರೆಗೊಳಗಾಗಿದ್ದ ಸಂತ್ರಸ್ತರನ್ನು ಭೇಟಿಯಾಗಿ ಅವರ ಅಹವಾಲು ಸ್ವೀಕರಿಸಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ ಮತ್ತೆ ಮೂರು ದಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಜ್ಜಾಗಿದ್ದಾರೆ.
ಈ ಬಾರಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ಮಾಡಲಿದ್ದಾರೆ. ಮುಧೋಳ, ಮಳಲಿ, ತೇರದಾಳ, ನಂದಗಾವ, ಡವಳೇಶ್ವರ, ಅಸಕಿ, ಹಿಪ್ಪರಗಿ, ಜಮಖಂಡಿ, ತುಬಚಿ, ಶೂರಪಾಲಿ, ಟಕಳಕಿ, ಅಥಣಿ, ಹಲ್ಯಾಳ, ಸತ್ತಿ, ಕಾಗವಾಡ, ಕಿತ್ತೂರು, ಶಿರಗುಪ್ಪಿ, ಚಿಕ್ಕೋಡಿ-ಸದಲಗಾ, ಕಲ್ಲೋಳ, ಸವಲಗಾ, ನಿಪ್ಪಾಣಿ, ಗೋಕಾಕ್, ಲೊಳಸೂರ, ಅಡಬಟ್ಟಿ, ರಾಮದುರ್ಗ ಮತ್ತಿತರ ಭಾಗಗಳಿಗೆ ಭೇಟಿ ಕೊಡಲಿದ್ದು, ಜನರ ಸಮಸ್ಯೆಗಳನ್ನು ಸ್ವೀಕರಿಸಲಿದ್ದಾರೆ.
ಇಂದು ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಹೆಚ್‍ಎಎಲ್‍ನಿಂದ ಮೈಸೂರಿಗೆ ಸಿದ್ದರಾಮಯ್ಯ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಹೊರಟು 1.20 ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ತಲುಪುವ ಅವರು, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ 6 ಕ್ಕೆ ಹೊರಟು 6.20 ಕ್ಕೆ ಹೆಚ್‍ಎಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ.