ಬೆಂಗಳೂರು:ಕೊರೊನಾ ಸೋಂಕು ನಿಯಂತ್ರಣ, ಸೋಂಕಿತರಿಗೆ ಚಿಕಿತ್ಸೆ ನೀಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಹಾಗೂ ಸಾರ್ವಜನಿಕರ ರಕ್ಷಣೆಗೆ ಸರ್ಕಾರ ಯಾವ ರೀತಿ ಮುಂದಾಗಬೇಕು ಎಂಬುದರ ಬಗ್ಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ.
ಕೇಂದ್ರ, ರಾಜ್ಯದ ಅದಕ್ಷತೆ ಮತ್ತು ನಿರ್ಲಕ್ಷ್ಯ ಸಾವು ನೋವಿಗೆ ಕಾರಣ
ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು 15 ತಿಂಗಳಾದವು. ರಾಜ್ಯದಲ್ಲಿ 14 ತಿಂಗಳಾದವು. ಕಳೆದ ಒಂದು ತಿಂಗಳಿಂದೀಚೆಗೆ ಎರಡನೇ ಅಲೆ ಪ್ರಾರಂಭವಾಗಿದೆ. ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಕಳೆದ ವರ್ಷದ ಆರಂಭದಲ್ಲಿ ಕೋವಿಡ್ ಕಾಣಿಸಿಕೊಂಡಿತು. ಇದರ ಮೊದಲ ಹಂತದಲ್ಲಿ ಕೋವಿಡ್ ಸೋಂಕು ವ್ಯಾಪಿಸಲು ನಿಸರ್ಗದಲ್ಲಿನ ಏರುಪೇರುಗಳೂ ಸಹ ಕಾರಣವಾಗಿದ್ದವು ಎಂದು ಹೇಳಬಹುದು. ಆದರೆ, ಎರಡನೇ ಅಲೆಯ ಸಂದರ್ಭದಲ್ಲಿ ಉಂಟಾಗುತ್ತಿರುವ ಸಾವು-ನೋವುಗಳಿಗೆ ನೇರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅದಕ್ಷತೆ ಮತ್ತು ನಿರ್ಲಕ್ಷ್ಯಗಳೇ ಕಾರಣ.
ತಾಂತ್ರಿಕ ಸಲಹೆಗಾರರ ತಂಡದ ವರದಿಯ ನಿರ್ಲಕ್ಷ್ಯ
2020ರ ನವೆಂಬರ್ 21ರಂದು ಸಂಸತ್ತಿನ ಸ್ಥಾಯಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ಕೊರೊನಾ ಎರಡನೇ ಅಲೆ ಬರುವ ಬಗ್ಗೆ, ಅದಕ್ಕಾಗಿ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತು ವರದಿ ನೀಡಿತ್ತು. ಅದೇ ತಿಂಗಳ ಅಂತ್ಯದಲ್ಲಿ ನಮ್ಮಲ್ಲಿ ರಾಜ್ಯಸರ್ಕಾರ ರಚಿಸಿರುವ ತಾಂತ್ರಿಕ ಸಲಹೆಗಾರರ ತಂಡ ಎರಡನೇ ಅಲೆಯ ಕುರಿತು ಸಲಹೆಗಳನ್ನು ನೀಡಿತ್ತು. ಈ ವರದಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಸಂಪೂರ್ಣ ನಿರ್ಲಕ್ಷಿಸಿದವು. ಈ ವರದಿಗಳನ್ನು, ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಹಾಸಿಗೆ, ಆ್ಯಂಬುಲೆನ್ಸ್, ಔಷಧ, ಐಸಿಯು, ಆಕ್ಸಿಜನ್ ವ್ಯವಸ್ಥೆಗಳನ್ನು ಸಿದ್ದಪಡಿಸಿಕೊಳ್ಳಬೇಕಿತ್ತು. ಆದರೆ, ನೀವೇನು ಮಾಡಿದ್ದೀರಿ ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ. ಆರಂಭದಲ್ಲಿದ್ದ ಪರಿಸ್ಥಿತಿಯಲ್ಲಿ ಈಗ ಏನಾದರೂ ಬದಲಾವಣೆ ಆಗಿದೆಯೇ? ಇದ್ದರೆ ಸಾರ್ವಜನಿಕರಿಗೆ ತಿಳಿಸಿ ಎಂದಿದ್ದಾರೆ.
ಎಷ್ಟು ಬೆಡ್, ಐಸಿಯು, ಆಕ್ಸಿಜನ್ ವ್ಯವಸ್ಥೆ ಹೆಚ್ಚಿಸಿದ್ದೀರಿ?
ಹೊಸದಾಗಿ ಎಷ್ಟು ಬೆಡ್, ಐಸಿಯು, ಆಕ್ಸಿಜನ್ ವ್ಯವಸ್ಥೆ ಹೆಚ್ಚಿಸಿದ್ದೀರಿ? ರೆಮ್ ಡಿಸಿವಿಯರ್ ಉತ್ಪಾದನೆಯನ್ನು ಎಷ್ಟು ಹೆಚ್ಚಿಸಲಾಗಿದೆ? ಆಕ್ಸಿಜನ್ ಉತ್ಪಾದನೆಯನ್ನು ಎಷ್ಟು ಹೆಚ್ಚಿಸಲಾಗಿದೆ? ತಿಳಿಸಿ. ವೈದ್ಯಕೀಯ ಕ್ಷೇತ್ರದಲ್ಲಿ ತಜ್ಞರಾಗಿರುವ ಡಾ.ದೇವಿಪ್ರಸಾದ್ ಶೆಟ್ಟಿ ಅವರ ಪ್ರಕಾರ, ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚು ಸೋಂಕಿತರಾಗಿರುವವರು ಮತ್ತು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು, ಚಿಕ್ಕ ವಯಸ್ಸಿನವರು ಅವರ ಕುಟುಂಬಗಳ ದುಡಿಮೆಗೆ ಜೀವನಾಧಾರವಾಗಿರುವ ಯುವಕರೇ ಆಗಿದ್ದಾರೆ. ದುರಂತವೆಂದರೆ ಹೆಚ್ಚು ಮರಣ ಹೊಂದುತ್ತಿರುವವರೂ ಸಹ ಯುವಜನತೆ. ಕುಟುಂಬಗಳಲ್ಲಿ ದುಡಿಯುವ ವಯಸ್ಸಿನವರು ಮರಣ ಹೊಂದಿದರೆ ಇಡೀ ಕುಟುಂಬದ ಬದುಕು ಸಂಪೂರ್ಣ ಅಸ್ತವ್ಯಸ್ತವಾಗುತ್ತದೆ ಮತ್ತು ದುರಂತಕ್ಕೆ ಸಿಲುಕಿಕೊಳ್ಳುತ್ತದೆ.
ಡಾ. ದೇವಿಪ್ರಸಾದ್ ಶೆಟ್ಟಿಯವರ ಪ್ರಕಾರ ವರದಿಯಾಗುತ್ತಿರುವುದಕ್ಕಿಂತ ಕನಿಷ್ಟ 5ಪಟ್ಟು ಹೆಚ್ಚು ಜನ ಸೋಂಕಿತರಾಗುತ್ತಿದ್ದಾರೆ. ರಾಜ್ಯದಲ್ಲಿ 35 ರಿಂದ 40 ಸಾವಿರ ಜನ ಪ್ರತಿದಿನ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದರೆ, ವಾಸ್ತವದಲ್ಲಿ ಕನಿಷ್ಟ 2 ಲಕ್ಷ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆಂದೇ ಅರ್ಥ. ಇದರಲ್ಲಿ ಕನಿಷ್ಠ ಶೇ. 5ರಷ್ಟು ಜನಕ್ಕೆ ವೆಂಟಿಲೇಟರ್ ಅಗತ್ಯವಿದೆ ಎಂದರೂ 10,000 ವೆಂಟಿಲೇಟರ್ಗಳ ಅಗತ್ಯವಿರುತ್ತದೆ. ಒಬ್ಬ ರೋಗಿ 10 ದಿನ ಐಸಿಯುನಲ್ಲಿ ಇರುತ್ತಾನೆಂದುಕೊಂಡರೆ, 10 ದಿನಕ್ಕೆ ಒಂದು ವೆಂಟಿಲೇಟರ್ಗಳು ಬೇಕಾಗುತ್ತವೆ. ಆದರೆ, ರಾಜ್ಯದಲ್ಲಿ 10 ಸಾವಿರ ಐಸಿಯು ಬೆಡ್ಗಳಿಲ್ಲ. ಅತಿಹೆಚ್ಚು ಸೋಂಕಿತರಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಐಸಿಯು ಬೆಡ್ಗಳು ಕೇವಲ 952 ಮಾತ್ರ. ಅದರಲ್ಲಿ ವೆಂಟಿಲೇಟರ್ ಸೌಲಭ್ಯವಿರುವ ಬೆಡ್ಗಳ ಸಂಖ್ಯೆ ಕೇವಲ 434 ಮಾತ್ರ. ಇಂತಹ ಪರಿಸ್ಥಿತಿಯಲ್ಲಿ ರೋಗಿಗಳು ಮರಣ ಹೊಂದಿದರೆ, ಅದಕ್ಕೆ ಯಾರನ್ನು ಹೊಣೆ ಮಾಡಬೇಕು? ಕಳೆದ ಒಂದು ತಿಂಗಳಿನಿಂದಾದರೂ ಎಷ್ಟು ಐಸಿಯು ಬೆಡ್, ಆಕ್ಸಿಜನ್ ವ್ಯವಸ್ಥೆಯನ್ನು ಹೆಚ್ಚಿಸಿದ್ದೀರಿ? ಸಾರ್ವಜನಿಕರಿಗೆ ತಿಳಿಸಿ ಎಂದು ಹೇಳಿದ್ದಾರೆ.