ಬೆಂಗಳೂರು : ಕೃಷಿ ಮಾಡುವುದು ಹೇಗೆಂಬುದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮದೇ ಪಕ್ಷದ ಹಿರಿಯ ಸದಸ್ಯ ಆರ್ ವಿ ದೇಶಪಾಂಡೆ ಅವರಿಗೆ ಪಾಠ ಮಾಡಿದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು.
ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ವಿಧೇಯಕದ ಮೇಲೆ ಚರ್ಚೆಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ, ನಮ್ಮದು ಕೃಷಿಕ ಕುಟುಂಬ. ನಮ್ಮ ತಂದೆ ಹೆಬ್ಬೆಟ್ಟು. ನಾನು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ರಜೆ ಇದ್ದರೆ ಹೊಲದಲ್ಲಿ ಕೆಲಸ ಮಾಡಬೇಕಿತ್ತು, ಎಮ್ಮೆ ಮೇಯಿಸಬೇಕಿತ್ತು.
ನೇಗಿಲು ಹಿಡಿದು ಬೊಬ್ಬೆ ಬರುತ್ತಿತ್ತು. ನಿಂಗೇನು ( ದೇಶಪಾಂಡೆ) ಕೃಷಿ ಬಗ್ಗೆ ಗೊತ್ತಿಲ್ಲ ಬಿಡಯ್ಯ, ಬೇಸಿಕಲಿ ಯು ಆರ್ ಲ್ಯಾಂಡ್ ಲಾರ್ಡ್. ಜಮೀನ್ದಾರ. ಹೀಗಾಗಿ ನಿಮಗೆ ಗೊತ್ತಿರಲ್ಲ' ಎಂದರು.
ಆಗ ದೇಶಪಾಂಡೆ ಅವರು ಪ್ರತಿಕ್ರಿಯಿಸಿ, ನಾವು ಕೃಷಿ ಕುಟುಂಬದಿಂದ ಬಂದವರೆ. ಆದರೆ, ವಕೀಲಿ ವೃತ್ತಿ ಮಾಡುತ್ತಿದ್ದೆವು ಅಷ್ಟೇ ಎಂದರು. ಇನ್ನು ನೀವು (ರಮೇಶ್ ಕುಮಾರ್) ಬಿಡಿ ಶಾನುಬೋಗರು, ನೀವು ಲ್ಯಾಂಡ್ ಲಾರ್ಡ್ ಎಂದು ಸಿದ್ದರಾಮಯ್ಯ ಕೇಳಿದಾಗ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿ, ಲ್ಯಾಂಡೂ ಇಲ್ಲ, ಲಾರ್ಡೂ ಇಲ್ಲ ಎಂದು ನಗೆ ಚಟಾಕಿ ಹಾರಿಸಿದರು. ನಂತರ ಸಿದ್ದರಾಮಯ್ಯ ಅವರು ಚರ್ಚೆ ಮುಂದುವರೆಸಿದರು.