ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಶಾಸಕ ಪಕ್ಷದ ಸಭೆ ಆರಂಭವಾಗಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆರಂಭವಾಗಿರುವ ಸಭೆಯಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಎಸ್.ಆರ್.ಪಾಟೀಲ್, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಹಿರಿಯ ನಾಯಕರಾದ ಹೆಚ್.ಕೆ.ಪಾಟೀಲ್, ಡಾ. ಜಿ.ಪರಮೇಶ್ವರ್, ಹರಿಪ್ರಸಾದ್, ದಿನೇಶ್ ಗುಂಡೂರಾವ್, ನಸೀರ್ ಅಹಮದ್ ಸೇರಿದಂತೆ ಬಹುತೇಕ ಎಲ್ಲಾ ನಾಯಕರು ಉಪಸ್ಥಿತರಿದ್ದಾರೆ.
ಸೆಪ್ಟೆಂಬರ್ 21ರಿಂದ ಆರಂಭವಾಗುವ ವಿಧಾನ ಮಂಡಲ ಮಳೆಗಾಲದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳೋಕೆ ಕಾಂಗ್ರೆಸ್ ನಿರ್ಧಾರ ಮಾಡಿದ್ದು, ಈ ಸಂಬಂಧ ಸಭೆಯಲ್ಲಿ ಕೂಲಂಕಷ ಹಾಗೂ ವಿಸ್ತೃತ ಚರ್ಚೆ ನಡೆಯುತ್ತಿದೆ. ಹಲವು ಮಹತ್ವದ ವಿಚಾರ ಇಟ್ಟುಕೊಂಡು ಸದನದ ಒಳಗೆ, ಹೊರಗೆ ಹೋರಾಟ ನಡೆಸಲು ಸಭೆಯಲ್ಲಿ ಚರ್ಚಿಸಲಾಗಿದೆ. ರಾಜ್ಯ ಸರ್ಕಾರದ ವಿವಾದಾತ್ಮಕ ಕಾಯ್ದೆಗಳ ಜಾರಿ ವಿಚಾರ ಕೂಡ ಪ್ರಸ್ತಾಪವಾಗಿದೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ಆರಂಭ ಕೊರೊನಾ ಸಂದರ್ಭದಲ್ಲಿ ಮೆಡಿಕಲ್ ಕಿಟ್ ಅವ್ಯವಹಾರ, ಪ್ರವಾಹ ಸಂತ್ರಸ್ತರಿಗೆ ಇನ್ನೂ ಸಿಗದ ಪರಿಹಾರ, ರಾಜ್ಯದಲ್ಲಿ ಕುಸಿದ ಕಾನೂನು ಸುವ್ಯವಸ್ಥೆಯ ವಿಚಾರ, ಡಿ.ಜೆ.ಹಳ್ಳಿ ಗಲಭೆ, ಡ್ರಗ್ಸ್ ದಂಧೆ ಬಗ್ಗೆ ಹೋರಾಟ ಮತ್ತಿತರ ವಿಚಾರವಾಗಿ ಸದನದಲ್ಲಿ ಧ್ವನಿ ಎತ್ತಲು ನಾಯಕರ ತೀರ್ಮಾನ ಕೈಗೊಂಡಿದ್ದಾರೆ.